Site icon Vistara News

Monkeypox: ದೇಶದ ಮೊದಲ ಪ್ರಕರಣ ಕೇರಳದಲ್ಲಿ ಪತ್ತೆ? ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಕಂಡಿದೆ ಲಕ್ಷಣ

veena george

ತಿರುವನಂತಪುರಂ: ಕಳೆದ ಮೇ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿ ಇದೀಗ ೨೦ಕ್ಕೂ ದೇಶಗಳಿಗೆ ಹರಡಿರುವ ಮಂಕಿ ಪಾಕ್ಸ್‌ ವೈರಸ್‌ ಸಮಸ್ಯೆ ಇದೀಗ ಭಾರತಕ್ಕೂ ಕಾಲಿಟ್ಟಂತೆ ಕಾಣುತ್ತಿದೆ. ವಿದೇಶಕ್ಕೆ ಹೋಗಿ ಮರಳಿ ಬಂದ ಕೇರಳದ ವ್ಯಕ್ತಿಯೊಬ್ಬರಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ಈ ವ್ಯಕ್ತಿಯನ್ನು ಇದೀಗ ಕ್ವಾರಂಟೈನ್‌ಗೆ ಕಳುಹಿಸಲಾಗಿದ್ದು, ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಶೋಧನಾ ಕೇಂದ್ರಕ್ಕೆ ರವಾನಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಇದು ಮಂಕಿ ಪಾಕ್ಸ್‌ ರೋಗವೇ ಅಲ್ಲವೇ ಎನ್ನುವುದು ನಿರ್ಧಾರವಾಗಲಿದೆ.

ವಿದೇಶದಿಂದ ಮರಳಿದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ನ ಕೆಲವು ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರನ್ನು ರಾಜ್ಯದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಗುರುವಾರ ಹೇಳಿದ್ದಾರೆ.

ವಿದೇಶದಿಂದ ಮರಳಿ ಬಂದ ವ್ಯಕ್ತಿಯಲ್ಲೂ ಸೋಂಕಿನ ಕೆಲವು ಲಕ್ಷಣಗಳಿದ್ದವು. ಜತೆಗೆ ಅವರು ವಿದೇಶದಲ್ಲಿ ಸೋಂಕಿತ ವ್ಯಕ್ತಿಯ ಜತೆ ಇದ್ದು ಬಂದಿದ್ದರು ಎಂದು ಹೇಳಿದ ವೀಣಾ ಜಾರ್ಜ್‌ ರೋಗಿಯ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ.

ಮೇ ತಿಂಗಳಿನಲ್ಲಿ ಆರಂಭ
ಮಂಕಿ ಪಾಕ್ಸ್‌ ಈ ಹಿಂದೆ ಹಲವು ಬಾರಿ ದಾಳಿ ನಡೆಸಿರುವ ಹಿನ್ನೆಲೆ ಇದೆ. ಆದರೆ, ಇತ್ತೀಚೆಗೆ ಕಂಡಿದ್ದು ಈ ವರ್ಷದ ಮೇ ತಿಂಗಳಲ್ಲಿ. ಮೇ ೬ರಂದು ಇಂಗ್ಲೆಂಡ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ನೈಜೀರಿಯಾಕ್ಕೆ ಹೋಗಿ ಬಂದ ವ್ಯಕ್ತಿಯಲ್ಲಿ ಸಮಸ್ಯೆ ಕಂಡಿತ್ತು. ಅದಾದ ಬಳಿಕ ಉತ್ತರ ಮತ್ತು ದಕ್ಷಿಣ ಅಮೆರಿಕ, ಏಷಿಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಇದು ಕಂಡುಬಂದಿದೆ. ಜುಲೈ ೧೩ರವರೆಗಿನ ಮಾಹಿತಿಯಂತೆ ಜಗತ್ತಿನಲ್ಲಿ ಈಗ ೧೧,೦೨೩ ಪ್ರಕರಣಗಳು ಇವೆ. ಒಟ್ಟು ೧೨ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ದೇಶದೆಲ್ಲೆಡೆ ಕಟ್ಟೆಚ್ಚರಕ್ಕೆ ಸೂಚನೆ
ಕೇರಳದಲ್ಲಿ ಮಂಕಿ ಪಾಕ್ಸ್‌ ಶಂಕಿತ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ವಿದೇಶದಿಂದ ಅದರಲ್ಲೂ ಮಂಕಿ ಪಾಕ್ಸ್‌ ಪ್ರಕರಣಗಳು ಕಂಡುಬಂದಿರುವ ದೇಶಗಳಿಂದ ವಿಮಾನದ ಮೂಲಕ ಬರುವ ಪ್ರಯಾಣಿಕರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರಕಾರ ಸದ್ಯವೇ ಅಧಿಕೃತ ಮಾರ್ಗಸೂಚಿಗಳನ್ನು ಪ್ರಕಟಿಸುವ ಸಾಧ್ಯತೆಯೂ ಇದೆ.

ಮಧ್ಯಂತರ ಸೂಚನೆ ನೀಡಲಾಗಿತ್ತು
ಮೇ ತಿಂಗಳಲ್ಲಿ ಜಾಗತಿಕವಾಗಿ ಮಂಕಿ ಪಾಕ್ಸ್‌ ಪ್ರಕರಣಗಳು ಪತ್ತೆ ಆಗುತ್ತಿದ್ದಂತೆಯೇ ಕೇಂದ್ರದ ಸರಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಧ್ಯಂತರ ಸಲಹೆಯನ್ನು ನೀಡಿತ್ತು.

ಕಳೆದ 21 ದಿನಗಳಲ್ಲಿ, ಮಂಕಿಪಾಕ್ಸ್‌ ಸೋಂಕು ಪತ್ತೆಯಾಗಿರುವ ದೇಶಗಳಿಗೆ ಪ್ರಯಾಣಿಸಿದ ಜನರ ಮೇಲೆ ಹೆಚ್ಚಿನ ನಿಗಾ ಇರಿಸಬೇಕು”ದು ಹೇಳಿತ್ತು. ಮಂಕಿಪಾಕ್ಸ್‌ನ ದೃಢೀಕೃತ ಅಥವಾ ಶಂಕಿತ ಪ್ರಕರಣಗಳು ಅಥವಾ ದೃಢೀಕೃತ ಅಥವಾ ಶಂಕಿತ ಮಂಕಿ ಪಾಕ್ಸ್ ಹೊಂದಿರುವ ವ್ಯಕ್ತಿ ಅಥವಾ ಜನರೊಂದಿಗೆ ಸಂಪರ್ಕವನ್ನು ವರದಿ ಮಾಡಬೇಕು ಎಂದು ಸೂಚಿಸಿದೆ. ಎಲ್ಲಾ ಶಂಕಿತ ಪ್ರಕರಣಗಳನ್ನು ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಜಿಲ್ಲಾ ಕಣ್ಗಾವಲು ಅಧಿಕಾರಿಗೆ ವರದಿ ಮಾಡುವಂತೆ ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ರಕ್ತನಾಳಗಳು, ರಕ್ತ, ಕಫ ಇತ್ಯಾದಿಗಳಿಂದ ದ್ರವ ಮಾದರಿಗಳನ್ನು ಮಂಗನ ಕಾಯಿಲೆ ಪರೀಕ್ಷೆಗಾಗಿ ಪುಣೆಯ ಎನ್‌ಐವಿಗೆ ಕಳುಹಿಸಲು ಸಲಹೆಯಲ್ಲಿ ಶಿಫಾರಸು ಮಾಡಲಾಗಿದೆ. ಒಂದು ವೇಳೆ ಪಾಸಿಟಿವ್ ಕೇಸ್ ಪತ್ತೆಯಾದಲ್ಲಿ, ಕಳೆದ 21 ದಿನಗಳಲ್ಲಿ ರೋಗಿಯ ಸಂಪರ್ಕಗಳನ್ನು ಗುರುತಿಸಲು ತಕ್ಷಣ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಪ್ರಾರಂಭಿಸಬೇಕು ಎಂದು ಸಲಹೆಗಾರ ತಿಳಿಸಿತ್ತು.

ಇದನ್ನೂ ಓದಿ| ಅಮೆರಿಕದಲ್ಲಿ ಹರಡ್ತಿದೆ ಮಂಕಿ ಪಾಕ್ಸ್‌, ಏನಿದು ಹೊಸ ರೋಗ, ಎಷ್ಟು ಭಯಾನಕ?

Exit mobile version