ಬೆಂಗಳೂರು: ನಿರೀಕ್ಷಿಸಿದಂತೆಯೇ ಈ ಬಾರಿ ಮುಂಗಾರು ಆಗಮನ ವಿಳಂಬವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ವರದಿ ಪ್ರಕಾರ ಭಾನುವಾರವೇ (June 4) ಕೇರಳಕ್ಕೆ ಮುಂಗಾರು ಪ್ರವೇಶವಾಗಬೇಕಿತ್ತು. ಆದರೆ, ಇನ್ನೂ ಮೂರ್ನಾಲ್ಕು ದಿನ ಮುಂಗಾರು ಪ್ರವೇಶವಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಹಾಗೆ ನೋಡಿದರೆ, ನೈಋತ್ಯ ಮುಂಗಾರು ಜೂನ್ 3ರಂದೇ ಲಕ್ಷದ್ವೀಪವನ್ನು ಪ್ರವೇಶಿಸಿದೆ. ಆದರೂ, ಕೇರಳ ಪ್ರವೇಶಿಸಿ, ನಂತರ ದೇಶಾದ್ಯಂತ ಮುಂಗಾರು ಮಳೆಯಾಗುವುದು ವಿಳಂಬವಾಗಿದೆ. ಇದರಿಂದಾಗಿ, ಹವಾಮಾನ ಇಲಾಖೆಯ ಅಂದಾಜು ಏರುಪೇರಾಗಿದೆ. ಹಾಗೆ ನೋಡಿದರೆ, ಭಾರತದಲ್ಲಿ ಸರ್ಕಾರದ ಹವಾಮಾನ ಇಲಾಖೆ ಹಾಗೂ ಖಾಸಗಿ ಸಂಸ್ಥೆಯಾದ ಸ್ಕೈಮೆಟ್ ವೆದರ್ ಸಂಸ್ಥೆಗಳು ಮುಂಗಾರು ಮಳೆ ಸೇರಿ ವಿವಿಧ ರೀತಿಯಲ್ಲಿ ಹವಾಮಾನ ವರದಿ ನೀಡುತ್ತವೆ. ಹಾಗಾದರೆ, ದೇಶದಲ್ಲಿ ಯಾವ ಸಂಸ್ಥೆಯ ಹವಾಮಾನ ವರದಿ ನಿಜವಾಗುತ್ತದೆ? ಹವಾಮಾನ ಇಲಾಖೆ ಹಾಗೂ ಸ್ಕೈಮೆಟ್ ವೆದರ್ ಸಂಸ್ಥೆಗಳಲ್ಲಿ ಯಾವ ಸಂಸ್ಥೆಯ ವರದಿ ನಿಖರವಾಗಿರುತ್ತದೆ ಅಥವಾ ವಾಸ್ತವಕ್ಕೆ ಹತ್ತಿರವಾಗಿರುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಕಳೆದ ವರ್ಷದಂತೆ ಈ ಬಾರಿಯೂ ನಿಜವಾಗದ ಐಎಂಡಿ ವರದಿ
ಭಾರತಕ್ಕೆ ಮಾನ್ಸೂನ್ ಪ್ರವೇಶದ ಕುರಿತು ಹವಾಮಾನ ಇಲಾಖೆ ನೀಡಿದ ವರದಿಯು ನಿಜವಾಗಿರಲಿಲ್ಲ. ಕಳೆದ ಬಾರಿ ಮೇ 27ರಂದೇ ಮುಂಗಾರು ಆಗಮನವಾಗುತ್ತದೆ ಎಂದು ಐಎಂಡಿ ವರದಿ ನೀಡಿತ್ತು. ಆದರೆ, ವರದಿಯಲ್ಲಿ ಉಲ್ಲೇಖಿಸಿದ ದಿನಾಂಕಕ್ಕಿಂತ ಎರಡು ದಿನ ನಂತರ ಅಂದರೆ, ಮೇ 29ರಂದು ಮುಂಗಾರು ಪ್ರವೇಶವಾಗಿತ್ತು. ಈ ಬಾರಿಯೂ ಜೂನ್ 4ಕ್ಕೆ ಪ್ರವೇಶವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಜೂನ್ 4ರಂದು ಮುಂಗಾರು ಪ್ರವೇಶ ಆಗಿಲ್ಲ.
ಇದನ್ನೂ ಓದಿ: Weather Report: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೆರೆಡು ದಿನ ಭಾರಿ ವರುಣ; ಬೆಂಗಳೂರಲ್ಲಿ ಮಳೆ ಹೇಗೆ?
ಸ್ಕೈಮೆಟ್ ವರದಿ ಹೇಳಿದ್ದೇನು?
ದೇಶದಲ್ಲಿ ಈ ಬಾರಿ ಜೂನ್ 7ರಂದು ಮುಂಗಾರು ಪ್ರವೇಶಿಸಲಿದೆ ಎಂದು ಸ್ಕೈಮೆಟ್ ಹೇಳಿತ್ತು. ಜೂನ್ 7ರ ನಂತರದ ಮೂರು ದಿನ ಅಥವಾ ಅದಕ್ಕಿಂತ ಮೂರು ದಿನ ಮೊದಲು ಮುಂಗಾರು ಪ್ರವೇಶಿಸುತ್ತದೆ ಎಂದು ಹೇಳಿತ್ತು. ಈಗ ಜೂನ್ 7 ಅಥವಾ 8ರಂದು ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆಯೇ ಹೇಳಿದೆ. ಹಾಗಾಗಿ, ಜೂನ್ 7ರಂದು ಮುಂಗಾರು ಪ್ರವೇಶಿಸಿದರೆ ಸ್ಕೈಮೆಟ್ ವರದಿಯೇ ನಿಜವಾಗಲಿದೆ.
ಭಾರತದಲ್ಲಿ ಈ ಬಾರಿ ವಾಡಿಕೆಯಷ್ಟು ಎಂದರೆ, ಶೇ.96ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಇದರಿಂದ ದೇಶದ ರೈತರ ಮುಖದಲ್ಲಿ ಸಂತಸ ಮನೆ ಮಾಡಿದೆ. ಆದರೆ, ಸ್ಕೈಮೆಟ್ ವರದಿಯು ಜೂನ್‌ನಲ್ಲಿ ದೇಶಾದ್ಯಂತ ವಾಡಿಕೆಯಷ್ಟು ಮಳೆಯಾಗುವುದಿಲ್ಲ ಎಂದು ತಿಳಿಸಿದೆ. ಇದರಿಂದಾಗಿ ಯಾವ ಸಂಸ್ಥೆಯ ಹವಾಮಾನ ವರದಿ ನಿಜವಾಗಲಿದೆ ಎಂಬ ಕುತೂಹಲ ಮೂಡಿದೆ.