Site icon Vistara News

Parliament Session| ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭ, 32 ವಿಧೇಯಕ ಮಂಡನೆ ನಿರೀಕ್ಷೆ

parliment

ನವ ದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ (Parliament Session) ಆರಂಭವಾಗಲಿದೆ. ಆಗಸ್ಟ್‌ ೧೨ರ ತನಕ ಅಧಿವೇಶನ ಮುಂದುವರಿಯಲಿದೆ. ಈ ಸಲ ಒಟ್ಟು ೩೨ ವಿಧೇಯಕಗಳು ಮಂಡನೆಯಾಗುವ ನಿರೀಕ್ಷೆ ಇದೆ.

ಜಿಎಸ್‌ಟಿ, ಬೆಲೆ ಏರಿಕೆ, ಸಂಸತ್‌ ಆವರಣದಲ್ಲಿ ಧರಣಿ, ಪ್ರತಿಭಟನೆಗೆ ಅವಕಾಶ ನೀಡದಿರುವುದು, ಅಗ್ನಿಪಥ್‌ ಯೋಜನೆಯ ವಿವಾದ ಇತ್ಯಾದಿ ಅಸ್ತ್ರಗಳನ್ನು ಸರ್ಕಾರದ ವಿರುದ್ಧ ಪ್ರಯೋಗಿಸಲು ಪ್ರತಿಪಕ್ಷಗಳೂ ಸಜ್ಜಾಗಿವೆ. ಬೆಳಗ್ಗೆ ೧೧ ಗಂಟೆಯಿಂದ ಅಧಿವೇಶನ ಆರಂಭವಾಗಲಿದೆ.

” ಅಧಿವೇಶನದಲ್ಲಿ ವಿಷಯಗಳಿಗೆ ಸಂಬಂಧಿಸಿ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂಬುದು ಜನತೆಯ ಅಪೇಕ್ಷೆಯಾಗಿದೆ. ಗೌರವಾನ್ವಿತ ಸದಸ್ಯರು ದೇಶದ ಹಿತಾಸಕ್ತಿಯ ವಿಷಯಗಳ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಬೇಕು ಮತ್ತು ಚರ್ಚಿಸಬೇಕು. ಸದನದ ಸಭ್ಯತೆಯನ್ನು, ಘನತೆಯನ್ನು ಹೆಚ್ಚಿಸಲು ಸರ್ವಪಕ್ಷಗಳು ಕೊಡುಗೆ ನೀಡುತ್ತವೆ ಎಂಬ ವಿಶ್ವಾಸ ಇದೆʼʼ ಎಂದು ಲೋಕಸಭೆಯ ಸ್ಪೀಕರ್‌ ಓಮ್‌ ಬಿರ್ಲಾ ಟ್ವೀಟ್‌ ಮಾಡಿದ್ದಾರೆ.

” ಒಟ್ಟು ೩೨ ವಿಧೇಯಕಗಳ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಈಗಾಗಲೇ ಚರ್ಚೆಯಾಗಿದೆ. ೧೪ ವಿಧೇಯಕಗಳು ರೆಡಿಯಾಗಿವೆ. ಆದರೆ ಸದನದಲ್ಲಿ ಚರ್ಚೆಯಾಗದೆ ವಿಧೇಯಕಗಳನ್ನು ಅಂಗೀಕರಿಸಲಾಗುವುದಿಲ್ಲʼʼ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಷಿ ತಿಳಿಸಿದ್ದಾರೆ.

” ಸರ್ಕಾರ ನಡೆಸಿದ ಸರ್ವಪಕ್ಷ ಸಭೆಯಲ್ಲಿ ೩೬ ಪಕ್ಷಗಳು ಭಾಗವಹಿಸಿದ್ದವು. ೪೫ ಪಕ್ಷಗಳಿಗೆ ಆಹ್ವಾನಿಸಲಾಗಿತ್ತುʼʼ ಎಂದು ತಿಳಿಸಿದ್ದಾರೆ.

ಮಂಡನೆಯಾಗಲಿರುವ ಪ್ರಮುಖ ವಿಧೇಯಕಗಳು

ಮಾಧ್ಯಮ ಮತ್ತು ನಿಯತಕಾಲಿಕೆಗಳ ನೋಂದಣಿ ವಿಧೇಯಕ: ಮಾಧ್ಯಮ ಮತ್ತು ನಿಯತಕಾಲಿಕೆಗಳ ನೋಂದಣಿ ವಿಧೇಯಕ, ೨೦೨೨ ಮಂಡನೆಯಾಗಲಿದೆ. ಇದು ಪ್ರೆಸ್‌ ಮತ್ತು ಪುಸ್ತಕಗಳ ನೋಂದಣಿ ಕಾಯಿದೆ-೧೮೬೭ ಅನ್ನು ಬದಲಿಸಲಿದೆ.

ಮುನಿಸಿಪಾಲಿಟಿಗಳ ವಿಕಾಸಕ್ಕೆ ಬಿಲ್: ದೇಶಾದ್ಯಂತ ಮುನಿಸಿಪಾಲಿಟಿಗಳ ಹೆಚ್ಚಿನ ಅಭಿವೃದ್ಧಿಯ ಸಲುವಾಗಿ ಕಂಟೋನ್ಮೆಂಟ್‌ ವಿಧೇಯಕ ಮಂಡನೆಯಾಗಲಿದೆ. ಜನಜೀವನ ಗುಣಮಟ್ಟ ಸುಧಾರಣೆಯ ಅಂಶಗಳನ್ನು ಇದು ಒಳಗೊಂಡಿದೆ.

ಸಹಕಾರ ಸೊಸೈಟಿಗಳ ಬಲವರ್ಧನೆಗೆ ವಿಧೇಯಕ: ಬಹು ರಾಜ್ಯಗಳ ಸಹಕಾರ ಸೊಸೈಟಿ (ತಿದ್ದುಪಡಿ) ವಿಧೇಯಕ ಮಂಡನೆಯಾಗಲಿದೆ. ಇದು ಹಲವು ರಾಜ್ಯಗಳಲ್ಲಿ ಸಹಕಾರ ಸೊಸೈಟಿಗಳ ಕಾಯವೈಖರಿಗಳಲ್ಲಿ ಸರ್ಕಾರಗಳ ಪಾತ್ರವನ್ನು ಸುಧಾರಿಸುವ ಮತ್ತು ಸರಳಗೊಳಿಸುವ ಉದ್ದೇಶವನ್ನು ಒಳಗೊಂಡಿದೆ. ಹಲವು ರಾಜ್ಯಗಳಲ್ಲಿ ವಿಸ್ತರಿಸಿರುವ ಸಹಕಾರ ಸೊಸೈಟಿಗಳಲ್ಲಿ ಸದಸ್ಯರ ಚಟುವಟಿಕೆಗಳನ್ನು ಹೆಚ್ಚಿಸುವ, ಆ ಮೂಲಕ ಸೊಸೈಟಿಗಳು ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗುವ ಸಾಧ್ಯತೆ ಇದೆ. ಸೊಸೈಟಿಗಳ ಸ್ವಾಯತ್ತತೆಯನ್ನು ಹೆಚ್ಚಿಸುವ ಉದ್ದೇಶವನ್ನು ಇದು ಒಳಗೊಂಡಿದೆ. ಸ್ಥಾಪಿತ ಹಿತಾಸಕ್ತಿಗಳಿಂದ ಸದಸ್ಯರ ಠೇವಣಿಗಳನ್ನು ಸಂರಕ್ಷಿಸಲು ಕೂಡ ನಿಯಮಗಳನ್ನು ಒಳಗೊಳ್ಳಲಿದೆ.‌

ಐಬಿಸಿ ಕಾಯಿದೆಯ ಸುಧಾರಣೆ: ಬ್ಯಾಂಕ್‌ಗಳ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದ ಐಬಿಸಿ ಕಾಯಿದೆಯಲ್ಲಿ ಗಡಿಯಾಚೆಗಿನ ದಿವಾಳಿ ಕುರಿತ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ. ಇದು ವಿದೇಶಗಳಲ್ಲಿ ಕೂಡ ಆಸ್ತಿಗಳನ್ನು ಹೊಂದಿರುವ ಕಂಪನಿಗಳ ದಿವಾಳಿ ಪ್ರಕ್ರಿಯೆಗಳಲ್ಲಿನ ತೊಡಕುಗಳನ್ನು ಬಗೆಹರಿಸುವ ಉದ್ದೇಶವನ್ನು ಹೊಂದಿದೆ.

ಕಾಫಿ ಮಂಡಳಿ ಅಭಿವೃದ್ಧಿಗೆ ಬಿಲ್: ಕಾಫಿ (ಅಭಿವೃದ್ಧಿ ಮತ್ತು ಉತ್ತೇಜನ) ವಿಧೇಯಕ-೨೦೨೨ ಎಂಬ ಹೊಸ ವಿಧೇಯಕ ಮಂಡನೆಯಾಗಲಿದೆ. ಕಾಫಿ ಉದ್ದಿಮೆ, ಕಾಫಿ ಮಂಡಳಿಯ ಅಭಿವೃದ್ಧಿ, ಆಧುನಿಕತೆಯ ಉದ್ದೇಶವನ್ನು ಇದು ಹೊಂದಿದೆ.

ಗೋದಾಮುಗಳ ಅಭಿವೃದ್ಧಿಗೆ ವಿಧೇಯಕ: ಗೋದಾಮುಗಳ ಅಭಿವೃದ್ಧಿಯ ಮೂಲಕ ರೈತರ ಕೃಷಿ ಉತ್ಪನ್ನಗಳ ವೈಜ್ಞಾನಿಕ ದಾಸ್ತಾನಿಗೆ ಅನುಕೂಲ ಮಾಡಿಕೊಡಲು ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ.

Exit mobile version