ಸುರಿಯುತ್ತಿರುವ ಮಳೆಯ ನಡುವೆ ಹೊರಗೆ ಹೋಗುವುದು ಬೇಜಾರು. ಆದರೆ ಪ್ರಕೃತಿಯ ಸೌಂದರ್ಯ ಎದ್ದು ಕಾಣುವುದೇ ಮಳೆಗಾಲದಲ್ಲಿ (Monsoon Tour). ಈ ಸಂದರ್ಭದಲ್ಲಿ ದೂರ ಹೋಗುವುದು ಅಸಾಧ್ಯವಾದರೂ ಹತ್ತಿರ ಇರುವ ಕೆಲವು ತಾಣಗಳಲ್ಲಿ (tourist place) ಸುತ್ತಾಡಬಹುದು. ಮಳೆಯ ನಡುವೆ ಸುತ್ತಮುತ್ತಲಿನ ಪರಿಸರದಲ್ಲಿ (nature) ಕಾಣುವ ಹೊಸತನದ ಚಿಗುರನ್ನು ನೋಡಿ ಆನಂದಿಸಬಹುದು.
ಮಳೆಯ ಸೌಂದರ್ಯವನ್ನು ಅನುಭವಿಸಲು ಮಲೆನಾಡಿಗೆ (malenadu) ಹೋಗಬೇಕಿಲ್ಲ. ಯಾಕೆಂದರೆ ಬೆಂಗಳೂರಿನ (bengaluru) ಸುತ್ತಮುತ್ತಲಿರುವ ಕೆಲವು ತಾಣಗಳು ಮಳೆಗಾಲದ ಅದ್ಭುತ ನೋಟವನ್ನು ತೆರೆದಿಡುತ್ತದೆ. ಪ್ರಾಚೀನ ಭಾರತೀಯ ದೇವಾಲಯಗಳು ದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಪರಂಪರೆಯನ್ನು ಪ್ರದರ್ಶಿಸುತ್ತವೆ. ಈ ಪವಿತ್ರ ತಾಣಗಳು ಕೇವಲ ಪೂಜಾ ಸ್ಥಳಗಳಲ್ಲ. ಇತಿಹಾಸ, ಕಲೆ ಮತ್ತು ಆಧ್ಯಾತ್ಮಿಕತೆಯ ಭಂಡಾರಗಳಾಗಿವೆ. ಇವುಗಳಲ್ಲಿ ಹಲವು ದೇವಾಲಯ ನಮ್ಮ ಬೆಂಗಳೂರಿನ ಸುತ್ತಮುತ್ತಲಿದೆ. ಈ ಬಾರಿ ಮಳೆಗಾಲದಲ್ಲಿ ಈ ಎಂಟು ದೇವಾಲಯಗಳಲ್ಲಿ ಹೆಜ್ಜೆ ಹಾಕಿ ಮಳೆಗಾಲದ ನೆನಪನ್ನು ಬೆಚ್ಚಗೆ ಮನದಲ್ಲಿ ತುಂಬಿ ಇಡೋಣ.
1. ಚೆನ್ನಕೇಶವ ದೇವಸ್ಥಾನ
ಹಾಸನ ಜಿಲ್ಲೆಯಲ್ಲಿರುವ 12ನೇ ಶತಮಾನದ ಬೇಲೂರಿನ ಚೆನ್ನಕೇಶವ ದೇವಾಲಯವು ತನ್ನ ಸಂಕೀರ್ಣವಾದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ. ಇದು ನಕ್ಷತ್ರಾಕಾರದ ದೇವಾಲಯವಾಗಿದ್ದು, ಹಿಂದೂ ದೇವರಾದ ವಿಷ್ಣುವಿಗೆ ಸಮರ್ಪಿತವಾಗಿದೆ.
2. ಕೋಟಿಲಿಂಗೇಶ್ವರ ದೇವಸ್ಥಾನ
ಬೃಹತ್ ಶಿವಲಿಂಗಕ್ಕೆ ಹೆಸರುವಾಸಿಯಾಗಿರುವ ಈ ದೇವಾಲಯವು ವಿಶ್ವದ ಅತಿದೊಡ್ಡ ಲಿಂಗಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಕೋಟಿಲಿಂಗೇಶ್ವರ ದೇವಸ್ಥಾನ ಕೋಲಾರದಲ್ಲಿದೆ.
3. ಹೊಯ್ಸಳೇಶ್ವರ ದೇವಸ್ಥಾನ
12ನೇ ಶತಮಾನದ ಈ ದೇವಾಲಯವು ಹಾಸನ ಜಿಲ್ಲೆಯಲ್ಲಿದೆ ಮತ್ತು ಇದು ಶಿವನಿಗೆ ಸಮರ್ಪಿತವಾಗಿದೆ. ಹೊಯ್ಸಳ ವಾಸ್ತುಶೈಲಿಗೆ ಹೆಸರುವಾಸಿಯಾದ. ಇದು ಹಳೇಬೀಡುನಲ್ಲಿರುವ ಅತಿ ದೊಡ್ಡ ದೇವಾಲಯವಾಗಿದೆ.
4. ಶ್ರೀ ರಂಗನಾಥಸ್ವಾಮಿ ದೇವಸ್ಥಾನ
ಮೈಸೂರಿನ ಸಮೀಪ ಶ್ರೀರಂಗಪಟ್ಟಣದಲ್ಲಿರುವ ಈ ದೇವಾಲಯವು ಕರ್ನಾಟಕದಲ್ಲಿಯೇ ಅತಿ ದೊಡ್ಡದಾಗಿದೆ ಮತ್ತು ವಿಷ್ಣುವಿನ ರೂಪವಾದ ರಂಗನಾಥನಿಗೆ ಸಮರ್ಪಿತವಾಗಿದೆ. ವೈಷ್ಣವ ಸಂಪ್ರದಾಯದ 108 ಅಭಿಮಾನ ಕ್ಷೇತ್ರಗಳಲ್ಲಿ ಒಂದಾಗಿ ಇದು ವಿಶೇಷ ಸ್ಥಾನವನ್ನು ಹೊಂದಿದೆ.
5. ಲೇಪಾಕ್ಷಿ ದೇವಸ್ಥಾನ
ಬೆಂಗಳೂರಿನಿಂದ ಇದು ತುಂಬ ದೂರ ಏನಿಲ್ಲ. ಆಂಧ್ರಪ್ರದೇಶದ ಅನಂತಪುರದಲ್ಲಿದೆ ಲೇಪಾಕ್ಷಿ ದೇವಾಲಯ. ಇಲ್ಲಿನ ಅದ್ಭುತ ವಿಜಯನಗರ ವಾಸ್ತುಶಿಲ್ಪ ಮತ್ತು ಪ್ರಸಿದ್ಧ ನೇತಾಡುವ ಸ್ತಂಭಗಳು ಪ್ರವಾಸಿಗರಲ್ಲಿ ಬೆರಗು ಮೂಡಿಸುತ್ತದೆ. 16 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯದ ಸಂಕೀರ್ಣ ಕೆತ್ತನೆಗಳು ಮತ್ತು ವರ್ಣಚಿತ್ರಗಳು ನಯನ ಮನೋಹರವಾಗಿದೆ.
6. ಭೋಗ ನಂದೀಶ್ವರ ದೇವಸ್ಥಾನ
ನಂದಿ ಬೆಟ್ಟದ ತಪ್ಪಲಿನಲ್ಲಿರುವ ಈ ದೇವಾಲಯದ ಸಂಕೀರ್ಣವು ಶಿವನಿಗೆ ಸಮರ್ಪಿತವಾಗಿದೆ ಮತ್ತು ದ್ರಾವಿಡ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ನಿಖರವಾದ ಮೂಲಗಳು ತಿಳಿದಿಲ್ಲವಾದರೂ ವಾಸ್ತುಶಿಲ್ಪವು 9ನೇ – 10ನೇ ಶತಮಾನದ ಹಿಂದಿನದು ಎಂದು ನಂಬಲಾಗಿದೆ.
7. ಶ್ರೀ ಚಾಮುಂಡೇಶ್ವರಿ ದೇವಸ್ಥಾನ
ಮೈಸೂರಿನಲ್ಲಿರುವ ವಿಶ್ವಪ್ರಸಿದ್ಧ ಈ ದೇವಾಲಯವು ಚಾಮುಂಡಿ ಬೆಟ್ಟದ ಮೇಲಿದೆ ಮತ್ತು ದುರ್ಗದ ರೂಪವಾದ ಚಾಮುಂಡೇಶ್ವರಿ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ.
ಇದನ್ನೂ ಓದಿ: Sri Lanka Tour: ಕಡಿಮೆ ವೆಚ್ಚದಲ್ಲಿ ಶ್ರೀಲಂಕಾ ಪ್ರವಾಸ; ಐಆರ್‌ಸಿಟಿಸಿ ಸ್ಪೆಷಲ್ ಪ್ಯಾಕೇಜ್
8. ತಲಕಾಡು ಪಂಚಲಿಂಗ ದೇವಾಲಯಗಳು
ತಲಕಾಡು ಶಿವನಿಗೆ ಅರ್ಪಿತವಾದ ಪಂಚಲಿಂಗ ದೇವಾಲಯಗಳು ಸೇರಿದಂತೆ ಹಲವಾರು ಪುರಾತನ ದೇವಾಲಯಗಳಿಗೆ ನೆಲೆಯಾಗಿದೆ. ಪಂಚ ಲಿಂಗ ದರ್ಶನವು ಸಾಮಾನ್ಯವಾಗಿ ಪ್ರತಿ ಹನ್ನೆರಡು, ಏಳು, ಐದು ಅಥವಾ ಮೂರು ವರ್ಷಗಳಿಗೊಮ್ಮೆ ನಡೆಯುವ ಪ್ರಮುಖ ಕಾರ್ಯಕ್ರಮವಾಗಿದ್ದು, ಆಶೀರ್ವಾದ ಪಡೆಯಲು ಭಕ್ತರು ಐದು ದೇವಾಲಯಗಳಿಗೆ ಭೇಟಿ ನೀಡುತ್ತಾರೆ.