Site icon Vistara News

Moonlighting Side effects: ಎರಡೆರಡು ಕಡೆ ಕೆಲಸ ಮಾಡುತ್ತಿದ್ದರೆ ಎಚ್ಚರ; ಹೃದಯಾಘಾತ ಇವರಿಗೇ ಮೊದಲು!

Heart attack

#image_title

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಆರೋಗ್ಯ ಸಮಸ್ಯೆ ಹೆಚ್ಚಿದೆ ಎನ್ನುವುದು ಒಂದು ವಿಚಾರವಾದರೆ ಇನ್ನೊಂದೆಡೆ ಜೀವನ ನಿರ್ವಹಣೆಗೆಂದೇ ಜನರು ಎರಡು, ಮೂರು ಸಂಸ್ಥೆಗಳಲ್ಲಿ (Moonlighting Side effects) ಕೆಲಸ ಮಾಡಲಾರಂಭಿಸಿದ್ದಾರೆ. ಆದರೆ ಈ ರೀತಿ ಕೆಲಸ ಮಾಡುವುದರಿಂದ ನಿಮ್ಮ ಜೀವಕ್ಕೇ ಆಪತ್ತು ತಂದುಕೊಳ್ಳುತ್ತೀರಿ ಎಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.

ಹೌದು. ಕೊರೊನಾ ನಂತರದ ಅವಧಿಯಲ್ಲಿ ಮೂನ್‌ಲೈಟಿಂಗ್‌ ಬಗ್ಗೆ ಹೆಚ್ಚಾಗಿ ಕೇಳಿರುತ್ತೀರಿ. ಒಂದು ಕಂಪನಿಯಲ್ಲಿ ಶಾಶ್ವತ ಸಿಬ್ಬಂದಿಯಾಗಿ ಕೆಲಸ ಮಾಡುವುದಷ್ಟೇ ಅಲ್ಲದೆ ಬೇರೆ ಕಂಪನಿಗೂ ದುಡಿಯುವುದನ್ನು ಮೂನ್‌ಲೈಟ್‌ ಎನ್ನಲಾಗುತ್ತದೆ. ಐಟಿ ಕ್ಷೇತ್ರದಲ್ಲಂತೂ ಈ ಮೂನ್‌ಲೈಟಿಂಗ್‌ ಕೆಲಸಗಾರರು ಹೆಚ್ಚಾಗಿದ್ದು, ಈ ಬಗ್ಗೆ ಹಲವಾರು ಕಂಪನಿಗಳು ಕ್ರಮಗಳನ್ನೂ ತೆಗೆದುಕೊಂಡಿವೆ. ಅಂದ ಹಾಗೆ ಈ ರೀತಿ ಮೂನ್‌ಲೈಟ್‌ ಕೆಲಸ ಮಾಡುವವರಲ್ಲಿ ಹೆಚ್ಚಾಗಿ ಮೆದುಳಿನ ಪಾರ್ಶ್ವವಾಯು ಮತ್ತು ಹೃದಯಾಘಾತದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆಯಂತೆ. ಈ ಬಗ್ಗೆ ಹೈದರಾಬಾದ್‌ನ ವೈದ್ಯರು ವರದಿ ನೀಡಿದ್ದಾರೆ.

ಇದನ್ನೂ ಓದಿ: Narayana Murthy : ಭಾರತಕ್ಕೆ ಪ್ರಾಮಾಣಿಕತೆಯ ಸಂಸ್ಕೃತಿ ಬೇಕು, ಮೂನ್‌ಲೈಟಿಂಗ್‌ ವಿರುದ್ಧ ಮೂರ್ತಿ ಎಚ್ಚರಿಕೆ

“ನಾವು ಮೆದುಳಿನ ಪಾರ್ಶ್ವವಾಯು ಮತ್ತು ಹೃದಯಾಘಾತವಾದವರಿಗೆ ಶಸ್ತ್ರಚಿಕಿತ್ಸೆ ಮಾಡಿ, ಚಿಕಿತ್ಸೆ ನೀಡುತ್ತೇವೆ. ಕಳೆದ ಆರು ತಿಂಗಳುಗಳಲ್ಲಿ ಬೇರೆ ಬೇರೆ ನಗರಗಳಿಂದಲೂ ಕೂಡ ಅನೇಕರು ಈ ಸಮಸ್ಯೆಗಳನ್ನಿಟ್ಟುಕೊಂಡು ನಮ್ಮ ಬಳಿ ಬಂದು ಚಿಕಿತ್ಸೆ ಪಡೆದಿದ್ದಾರೆ. ವಿಚಿತ್ರವೆಂದರೆ ಈ ರೀತಿ ಚಿಕಿತ್ಸೆ ಪಡೆದಿರುವವರೆಲ್ಲರೂ ಐಟಿ ವೃತ್ತಿಯಲ್ಲಿರುವವರು. ಅದಲ್ಲದೆ ಎಲ್ಲರೂ ಒಂದಕ್ಕಿಂತ ಹೆಚ್ಚು ಕೆಲಸ ಮಾಡುತ್ತಿರುವವರು. ವಾರಕ್ಕೆ 60 ಗಂಟೆಗೂ ಹೆಚ್ಚು ಸಮಯ ಕೆಲಸ ಮಾಡುವವರು ಮತ್ತು ತಡರಾತ್ರಿಯವರೆಗೆ ಕೆಲಸ ಮಾಡುವವರೇ ಆಗಿದ್ದಾರೆ” ಎಂದು ಹೇಳಿದ್ದಾರೆ ಉಚ್ಚ್ವಾಸ್ ಟ್ರಾನ್ಸಿಶನಲ್‌ಕೇರ್‌ನ ಫಿಸಿಕಲ್ ಮೆಡಿಸಿನ್ ಮತ್ತು ಪುನರ್ವಸತಿ ಕೇಂದ್ರದ ನಿರ್ದೇಶಕ ಮತ್ತು ಮುಖ್ಯಸ್ಥ ವಿಜಯ್ ಬಥಿನಾ.

ಇದನ್ನೂ ಓದಿ: Moonlighting | ಮೂನ್‌ಲೈಟಿಂಗ್‌ ವಿರುದ್ಧ ಉದ್ಯೋಗಿಗಳಿಗೆ ಐಬಿಎಂ ಎಚ್ಚರಿಕೆ

ಕೇವಲ ಈ ವೈದ್ಯರು ಮಾತ್ರವಲ್ಲ. ಹಲವಾರು ವೈದ್ಯರು ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಾರಕ್ಕೆ 60 ಗಂಟೆಗಳಷ್ಟು ಸಮಯ ಕೆಲಸ ಮಾಡುವುದು ಮತ್ತು ತಡರಾತ್ರಿಯವರೆಗೆ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇದರಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಮೈಗಂಟಿಕೊಳ್ಳುತ್ತವೆ ಎನ್ನುವುದು ವೈದ್ಯರ ಅಭಿಪ್ರಾಯ.

Exit mobile version