ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತೀವ್ರ ವಾಗ್ದಾಳಿ ನಡೆಸಿದ್ದು, ರಾಹುಲ್ ಅವರನ್ನು ಮೂರ್ಖರ ಸರದಾರ (Moorkhon ke sardar) ಎಂದು ಟೀಕಿಸಿದ್ದಾರೆ. ಮಧ್ಯ ಪ್ರದೇಶದ ಚುನಾವಣಾ ಪ್ರಚಾರ ರ್ಯಾಲಿ ವೇಳೆ ಮಾತನಾಡಿದ ಮೋದಿ ಅವರು, ಭಾರತವು ಈಗ ಒಂದು ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊಬೈಲ್ ಫೋನುಗಳನ್ನು ರಫ್ತು ಮಾಡುತ್ತಿದೆ. ಆದರೆ, ಕಾಂಗ್ರೆಸ್ ನಾಯಕರು ಭಾರತದ ಸಾಧನೆಯನ್ನು ನಿರ್ಲಕ್ಷಿಸುವ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆಂದು ಹೇಳಿದರು. ಇದಕ್ಕ ಮೊದಲು ರಾಹುಲ್ ಗಾಂಧಿ ಅವರು, ದೇಶದ ಜನರು ಮೇಡ್ ಚೀನಾ ಮೊಬೈಲ್‌ಗಳನ್ನು ಹೊಂದಿದ್ದಾರೆಂದು ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಈ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉರಿದು ಬಿದ್ದಿದ್ದಾರೆ.
ನಿನ್ನೆ ಕಾಂಗ್ರೇಸ್ಸಿನ ಬುದ್ದಿವಂತರೊಬ್ಬರು ದೇಶದ ಜನ ಚೈನಾ ಮೊಬೈಲ್‌ಗಳನ್ನು ಮಾತ್ರ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಅರೇ ಮೂರ್ಖೋನ್ ಕೆ ಸರ್ದಾರ(ಮೂರ್ಖರ ಸರದಾರ) ನೀವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೀರಿ? ಕಾಂಗ್ರೆಸ್ ನಾಯಕರು ಭಾರತದ ಸಾಧನೆಗಳನ್ನು ನಿರ್ಲಕ್ಷಿಸುವ ಮಾನಸಿಕ ಕಾಯಿಲೆಗೆ ತುತ್ತಾಗಿದ್ದಾರೆ. ಅವರು ಭಾರತದಲ್ಲಿ ನೋಡಲು ಸಾಧ್ಯವಾಗದ ವಿದೇಶಿ ಕನ್ನಡಕವನ್ನು ಧರಿಸಿದ್ದಾರೆ ಎಂದು ರಾಹುಲ್ ಗಾಂಧಿ ಅವರ ಹೆಸರು ಹೇಳಲಿಚ್ಛಿಸದೇ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಾರತವು 20 ಸಾವಿರ ಕೋಟಿ ರೂ. ಮೌಲ್ಯದ ಮೊಬೈಲ್ ಫೋನುಗಳನ್ನು ಉತ್ಪಾದನೆ ಮಾಡುತ್ತಿತ್ತು. ಆದರೆ, ಈಗ ಭಾರತದ ಉದ್ಯಮವು 3.5 ಲಕ್ಷ ಕೋಟಿ ರೂ.ಗೂ ಅಧಿಕ ಬೆಳವಣಿಗೆಯನ್ನು ಕಂಡಿದೆ. ಅಲ್ಲದೇ, ಭಾರತವು 1 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ಮೊಬೈಲ್ ಫೋನುಗಳನ್ನು ರಫ್ತು ಮಾಡುತ್ತಿದೆ ಎಂದು ನರೇಂದ್ರ ಮೋದಿ ಅವರು ತಿರುಗೇಟು ನೀಡಿದರು.
ರಾಹುಲ್ ಗಾಂಧಿ ಆರೋಪ ಮಾಡಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ನೀತಿಗಳ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾಗಿರುವ ರಾಹುಲ್ ಗಾಂಧಿ ಅವರು ಸೋಮವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಾ, ತಮ್ಮ ಪಕ್ಷವು ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಬಯಸುತ್ತದೆ ಎಂದು ಹೇಳಿದರು.
”ನಿಮ್ಮ ಮೊಬೈಲ್ ಫೋನ್‌ನ ಹಿಂಭಾಗ, ನಿಮ್ಮ ಶರ್ಟ್, ನಿಮ್ಮ ಬೂಟುಗಳನ್ನು ನೋಡಿ, ಅಲ್ಲಿ ‘ಮೇಡ್ ಇನ್ ಚೀನಾ’ ಎಂದು ಬರೆಯಲಾಗಿದೆ. ನೀವು ಕ್ಯಾಮೆರಾ ಮತ್ತು ಶರ್ಟ್‌ಗಳ ಹಿಂದೆ ‘ಮೇಡ್ ಇನ್ ಮಧ್ಯಪ್ರದೇಶ’ ಟ್ಯಾಗ್‌ಗಳನ್ನು ನೋಡಿದ್ದೀರಾ? ಇದನ್ನೇ ನಾವು ಮಾಡಲು ಬಯಸುತ್ತೇವೆ,” ಎಂದು ರಾಹುಲ್ ಗಾಂಧಿ ಅವರು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Rahul Gandhi: ದೊಡ್ಡಪ್ಪ ರಾಹುಲ್ ಗಾಂಧಿಯನ್ನು ಭೇಟಿಯಾದ ವರುಣ್ ಪುತ್ರಿ!