ಚಂಡೀಗಢ: ಖ್ಯಾತ ಗಾಯಕ ಸಿಧು ಮೂಸೆ ವಾಲಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನನ್ನು ಬುಧವಾರ ಪಂಜಾಬ್‌ನ ಮಾನಸಾ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮೇ 29ರಂದು ಮಾನಸಾ ಜಿಲ್ಲೆಯ ಜವಾಹರ್ ಕಿ ಗ್ರಾಮದಲ್ಲಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ಕೊಲೆಯಾಗಿತ್ತು. ಈ ಕೃತ್ಯವನ್ನು ಕೆನಡಾದಲ್ಲಿರುವ ಗೋಲ್ಡಿ ಬ್ರಾರ್ ಮತ್ತು ತಿಹಾರ್ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಮಾಡಿಸಿದ್ದು ಎನ್ನುವುದು ತಿಳಿಯುತ್ತಿದ್ದಂತೆಯೇ ತಿಹಾರ್ ಜೈಲಿನಲ್ಲಿದ್ದ ಬಿಷ್ಣೋಯಿಯನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಈ ನಡುವೆ, ಆತನನ್ನು ಮಾನಸಾ ಜಿಲ್ಲಾ ಕೋರ್ಟ್‌ಗೆ ಹಾಜರುಪಡಿಸಲು ಮತ್ತು ಇನ್ನಷ್ಟು ಹೆಚ್ಚಿನ ತನಿಖೆಗೆ ಒಳಪಡಿಸಲು ಪಂಜಾಬ್ ಪೊಲೀಸರು ತಮ್ಮ ವಶಕ್ಕೆ ಕೇಳಿದ್ದರು. ಆದರೆ, ಬಿಷ್ಣೋಯಿ ಪರ ವಕೀಲರು ಆತನ ಜೀವಕ್ಕೆ ಅಪಾಯವಿದೆ ಎಂಬ ಕಾರಣ ನೀಡಿ ಪೊಲೀಸರ ವಶಕ್ಕೆ ನೀಡಲು ಆಕ್ಷೇಪ ಎತ್ತಿದ್ದರು. ಬೇಕಿದ್ದರೆ ವರ್ಚುವಲ್ ವಿಚಾರಣೆ ನಡೆಸಬಹುದು ಎಂಬ ಸಲಹೆ ನೀಡಿದ್ದರು.
ಆದರೆ, ದಿಲ್ಲಿಯ ಪಟಿಯಾಲಾ ಕೋರ್ಟ್ ಬಿಷ್ಣೋಯಿ ಪರ ವಕೀಲರ ವಾದವನ್ನು ಒಪ್ಪದೆ ಪಂಜಾಬ್ ಪೊಲೀಸರ ವಶಕ್ಕೆ ಒಪ್ಪಿಸಲು ಮಂಗಳವಾರ ಆದೇಶಿಸಿತ್ತು. ಆದರೆ, ಆತನನ್ನು ದಿಲ್ಲಿಯಿಂದ ಮಾನಸಾ ಜಿಲ್ಲಾ ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಬಿಗಿ ಭದ್ರತಾ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿತ್ತು. ಅದರಂತೆ ಎರಡು ಬುಲೆಟ್ ಪ್ರೂಫ್ ಕಾರು ಮತ್ತು ಇತರ ಹತ್ತು ವಾಹನಗಳು ಹಾಗೂ 100 ಪೊಲೀಸರ ಭದ್ರತೆ ನಡುವೆ ಆತನನ್ನು ಕರೆದೊಯ್ಯಲಾಗಿದೆ.
ಇಂದು (ಬುಧವಾರ) ಬೆಳಗ್ಗೆಯೇ ಪಂಜಾಬ್ ಪೊಲೀಸರು ಆರೋಪಿಯನ್ನು ಪಂಜಾಬ್‌ನ ಮಾನಸಾ ಜಿಲ್ಲೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಿ ಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಹೆಚ್ಚಿನ ತನಿಖೆಗೆ 7 ದಿನಗಳ ಕಾಲ ಪಂಜಾಬ್ ಪೊಲೀಸರ ವಶಕ್ಕೆ ನೀಡಿದೆ. ಆತನನ್ನು ಈಗ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಆತನ ಮುಂದಿನ ವಿಚಾರಣೆಯನ್ನು ವಿಶೇಷ ತನಿಖಾದಳ ನಡೆಸಲಿದೆ.
ಇದನ್ನು ಓದಿ| ಸಿಧು ಮೂಸೆ ವಾಲಾ ಹತ್ಯೆ ಕೇಸ್, ಗೋಲ್ಡಿ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ