ಮೋರ್ಬಿ: ಸೇತುವೆ ಕುಸಿತ ದುರ್ಘಟನೆ (Morbi Bridge Collapse) ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ಮಾಡಿ, ಸಾಂತ್ವನ ಹೇಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ದಾಖಲಿಸಲಾಗಿರುವ ಮೋರ್ಬಿಯ ಸರ್ಕಾರಿ ಆಸ್ಪತ್ರೆಯನ್ನು ರಾತ್ರೋರಾತ್ರಿ ದುರಸ್ತಿ ಮಾಡುತ್ತಿರುವ, ಸ್ವಚ್ಛಗೊಳಿಸುತ್ತಿರುವ ವಿಡಿಯೋ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಬಗ್ಗೆ ಕಾಂಗ್ರೆಸ್ ಕೂಡ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಷೇರ್ ಮಾಡಿಕೊಂಡಿದೆ. ಆಸ್ಪತ್ರೆಯ ಕೆಲವು ಗೋಡೆ ಮತ್ತು ಸೀಲಿಂಗ್ ಅನ್ನು ಹೊಸದಾಗಿ ಬಣ್ಣಬಳಿಯಲಾಗಿದೆ. 13 ಗಾಯಾಗಳುಗಳನ್ನು ದಾಖಲಿಸಲಾಗಿರುವ ಆಸ್ಪತ್ರೆಯ ಎರಡು ವಾರ್ಡ್‌ಗಳ ಬೆಡ್‌ಶೀಟ್‌ಗಳನ್ನು ಬದಲಿಸಲಾಗಿದೆ. ಬಹಳಷ್ಟು ಕಾರ್ಮಿಕರು ಆಸ್ಪತ್ರೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ತಡರಾತ್ರಿಯವರೆಗೂ ಮಾಡುತ್ತಿರುವುದು ಕಂಡು ಬಂತು. ಸೀಲಿಂಗ್, ಗೋಡೆಗಳನ್ನು ರಿಪೇರಿ ಮಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.
ಯಾವುದೇ ಗಣ್ಯ ವ್ಯಕ್ತಿ ಭೇಟಿ ನೀಡುವ ಮುಂಚೆ ಈ ರೀತಿಯ ರಿಪೇರಿ, ಸುಣ್ಣ ಬಣ್ಣ ಬಳಿಯುವುದು ಹೊಸದೇನಲ್ಲ. ಆದರೆ, ಪ್ರತಿಪಕ್ಷಗಳು ಈ ಬಗ್ಗೆ ವ್ಯಾಪಕ ಟೀಕೆಯನ್ನು ವ್ಯಕ್ತಪಡಿಸಿವೆ. ಕಾಂಗ್ರೆಸ್ ಮತ್ತು ಆಪ್‌ಗಳೆರಡೂ, ಪ್ರೈಮ್ ಮಿನಿಸ್ಟರ್ ಫೋಟೋ ಶೂಟ್ ಇವೆಂಟ್ ಮ್ಯಾನೇಜ್‌ಮೆಂಟ್ ಯಶಸ್ವಿಗೊಳಿಸಲು ಬಿಜೆಪಿ ಸರ್ಕಾರ ನಿರತವಾಗಿದೆ ಎಂದು ಕಿಡಿ ಕಾರಿವೆ.
ಭಾನುವಾರ ಸಂಭವಿಸಿದ ಮೋರ್ಬಿ ಬ್ರಿಡ್ಜ್ ದುರಂತದಲ್ಲಿ ಸುಮಾರು 140 ಜನರು ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಏತನ್ಮಧ್ಯೆ, ಈ ದುರ್ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | Morbi Bridge Collapse | ಮೋರ್ಬಿ ಬ್ರಿಡ್ಜ್ ಕುಸಿತ ದೇವರ ಸಂದೇಶವಲ್ಲವೇ? ಮೋದಿಗೆ ಸಿದ್ದು ಪ್ರಶ್ನೆ!