Site icon Vistara News

Morbi Bridge Collapse | ಮೋರ್ಬಿ ಸೇತುವೆ ಕುಸಿತ, ಒರೆವಾ ಕಂಪನಿಯ ಅಧಿಕಾರಿಗಳು ಸೇರಿ 9 ಮಂದಿ ಬಂಧನ

SIT submitted its report on Morbi Bridge Collapse

ನವದೆಹಲಿ: ಭಾನುವಾರ ಸಂಭವಿಸಿದ ಮೋರ್ಬಿ ಬ್ರಿಡ್ಜ್ ಕುಸಿತಕ್ಕೆ (Morbi Bridge Collapse) ಸಂಬಂಧಿಸಿದಂತೆ, ಸೇತುವೆ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಗುಜರಾತ್ ಮೂಲದ ಒರೆವಾ ಗ್ರೂಪ್‌ನ ಅಧಿಕಾರಿಗಳು ಸೇರಿದಂತೆ ಒಟ್ಟು 9 ಜನರನ್ನು ಬಂಧಿಸಲಾಗಿದೆ. ಒರೆವಾ ಕಂಪನಿಯ ಮ್ಯಾನೇಜರ್‌ಗಳು, ಟಿಕೆಟ್ ಕಲೆಕ್ಟರ್ಸ್, ಸೇತುವೆ ದುರಸ್ತಿ ಗುತ್ತಿಗೆದಾರರು ಮತ್ತು ಮೂವರು ಸೆಕ್ಯುರಿಟಿ ಗಾರ್ಡ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ದುರ್ಘಟನೆಯಲ್ಲಿ 140ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಂಧಿತ ಇಬ್ಬರು ಅಧಿಕಾರಿಗಳು ಬ್ರಿಡ್ಜ್ ರಿಪೇರಿ ಜವಾಬ್ದಾರಿಯನ್ನು ಹೊತ್ತಿದ್ದರು ಎಂದು ತಿಳಿದು ಬಂದಿದೆ.

ಈ ದುರ್ಘಟನೆಯಲ್ಲಿ ಮೃತಪಟ್ಟ 141 ಜನರ ಪೈಕಿ 40 ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ನೂರಕ್ಕೂ ಅಧಿಕ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೇತುವೆ ಕುಸಿದ ಪರಿಣಾಮ ಒಟ್ಟು 350 ಮಂದಿ ನದಿಯಲ್ಲಿ ಮುಳುಗಿದ್ದರು. ಈ ದುರ್ಘಟನೆಗೆ ಕಾರಣರಾದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಮೋರ್ಬಿ ಪೊಲೀಸ್ ಮುಖ್ಯಸ್ಥ ಅಶೋಕ್ ಯಾದವ್ ಅವರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಜೊತೆಗೆ, ವಾಯಪಡೆ ಮತ್ತು ನೌಕಾ ಪಡೆಗಳ ತಂಡವನ್ನು ನಿಯೋಜಿಸಲಾಗಿದೆ. ಗಾಯಾಳುಗಳನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ. ಏತನ್ಮಧ್ಯೆ, ಇಡೀ ಘಟನೆ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಕೈಗೊಳ್ಳಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ಈ ದುರ್ಘಟನೆಯಲ್ಲಿ ರಾಜ್‌ಕೋಟ್‌ನ ಬಿಜೆಪಿ ಸಂಸದರ ತಮ್ಮ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡಿದ್ದಾರೆ. ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ರಾಜಕೀಯ ಚಟುವಟಿಕೆಗಳು ಜೋರುಗೊಂಡಿದ್ದವು. ಈ ದುರ್ಘಟನೆಯಲ್ಲಿ ಎಲ್ಲ ಪಕ್ಷಗಳು ತಮ್ಮ ಪ್ರಚಾರ ಸಭೆ, ಮೆರವಣಿಗೆ, ರೋಡ್‌ ಶೋಗಳನ್ನು ಕ್ಯಾನ್ಸಲ್ ಮಾಡಿವೆ. ಆದಮಪುರದಲ್ಲಿ ನಡೆಯಬೇಕಿದ್ದ ಆಪ್‌ ರೋಡ್ ಶೋವನ್ನು ಅರವಿಂದ್ ಕೇಜ್ರಿವಾಲ್ ರದ್ದು ಮಾಡಿದ್ದಾರೆ.

ಇದನ್ನೂ ಓದಿ | Morbi Bridge Collapse | ಎಂಜಿನಿಯರಿಂಗ್ ಅದ್ಭುತ ಮೋರ್ಬಿ ಸೇತುವೆ ನಿರ್ಮಾಣ ಹಿಂದಿನ ಕತೆ ಕೌತುಕ

Exit mobile version