ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ನೂತನ ಸಂಸತ್ ಭವನದ ರಕ್ಷಣೆಯ ಹೊಣೆಯನ್ನು ಸೋಮವಾರದಿಂದ (ಮೇ 20) ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಬದಲು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಸಿಬ್ಬಂದಿಯು ವಹಿಸಿಕೊಳ್ಳಲಿದೆ. ಕಳೆದ ವರ್ಷ ಸಂಸತ್‌ನಲ್ಲಿ ಭದ್ರತಾ ಲೋಪ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು (Central Government) ಸಿಐಎಸ್‌ಎಫ್ ಸಿಬ್ಬಂದಿಯ ಭದ್ರತೆಗೆ ವಹಿಸಿದೆ. ಅದರಂತೆ, ಸೋಮವಾರದಿಂದ ಸಿಐಎಸ್‌ಎಫ್ ಸಿಬ್ಬಂದಿಯೇ ಸಂಸತ್‌ನ ಸಂಪೂರ್ಣ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸಲಿದೆ.
ಸಿಐಎಸ್‌ಎಫ್‌ನ ಸುಮಾರು 3,300 ಸಿಬ್ಬಂದಿಯು ಸಂಸತ್‌ಅನ್ನು ಹಗಲು-ರಾತ್ರಿ ಎನ್ನದೆ ರಕ್ಷಣೆ ಮಾಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ದೇಶದ ಸಂಸತ್‌ಅನ್ನು ಕಾಯುತ್ತಿದ್ದ ಸಿಆರ್‌ಪಿಎಫ್‌ನ 1,400 ಸಿಬ್ಬಂದಿಯು ಸಂಸತ್ ಭದ್ರತೆಯಿಂದ ವಿಮುಖರಾಗಲಿದ್ದಾರೆ. 2013ರಿಂದಲೂ ಸಿಆರ್‌ಪಿಎಫ್ ಪಡೆಗಳು ಸಂಸತ್‌ಗೆ ಭದ್ರತೆ ಒದಗಿಸಿದ್ದವು. ಸಿಆರ್‌ಪಿಎಫ್‌ನ ಪಿಡಿಜಿ (ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್) ವಾಹನಗಳು, ಶಸ್ತ್ರಾಸ್ತ್ರ, ಸಿಬ್ಬಂದಿಯನ್ನು ಸೋಮವಾರ ತೆರವುಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಿಐಎಸ್‌ಎಫ್ ಪಡೆಗಳು ಸಂಸತ್ ಭದ್ರತೆಗೆ ನಿಯೋಜನೆಗೊಂಡಿವೆ ಎಂದು ಹೇಳಲಾಗುತ್ತಿದೆ.
ಭದ್ರತಾ ವೈಫಲ್ಯ ಹೇಗಾಗಿತ್ತು?
2023ರ ಡಿಸೆಂಬರ್ 13ರಂದು ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ ಕಂಡುಬಂದಿತ್ತು. ಪ್ರೇಕ್ಷಕರ ಗ್ಯಾಲರಿಯಿಂದ ಕಾಲಾಪದ ಮಧ್ಯೆ ಜಿಗಿದ ಇಬ್ಬರು ದುಷ್ಕರ್ಮಿಗಳು ಹೊಗೆ ಬಾಂಬ್ (ಬಣ್ಣದ ಹೊಗೆ ಬರುವ ವಸ್ತುಗಳ ಸ್ಫೋಟ) ಸ್ಫೋಟಿಸಿದ್ದರು. ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಹೊಗೆ ಬಾಂಬ್ ಸ್ಫೋಟಿಸಿದ ಹಿನ್ನೆಲೆಯಲ್ಲಿ ಮೈಸೂರು ನಿವಾಸಿ ಸೇರಿ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನ ವ್ಯಕ್ತಿಗೆ ಪಾಸ್ ನೀಡಿದ್ದು ಕೂಡ ರಾಜಕೀಯ ಮೇಲಾಟಕ್ಕೆ ಕಾರಣವಾಗಿತ್ತು.
ಸಂಸತ್‌ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಎಫ್ ಮಹಾ ನಿರ್ದೇಶಕ ಅನೀಶ್ ದಯಾಳ್ ಸಿಂಗ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಸಿಆರ್‌ಪಿಎಫ್ ಹಾಗೂ ಹಲವು ಭದ್ರತಾ ತಜ್ಞರು, ಸಂಸತ್ ಭದ್ರತಾ ವ್ಯವಸ್ಥೆಯನ್ನು ಬದಲಿಸಬೇಕು ಎಂಬುದಾಗಿ ಶಿಫಾರಸು ಮಾಡಿದ್ದರು. ಸಿಆರ್‌ಪಿಎಫ್ ಬದಲು ಸಿಐಎಸ್‌ಎಫ್ ಪಡೆಗಳನ್ನು ಸಂಸತ್ ಭದ್ರತೆಗೆ ನಿಯೋಜಿಸುವುದು ಉತ್ತಮ ಎಂಬ ಶಿಫಾರಸು ವ್ಯಕ್ತವಾಗಿತ್ತು. ಹಾಗಾಗಿ, ಕೇಂದ್ರ ಸರ್ಕಾರವು ಸಂಸತ್ ಭದ್ರತೆಗೆ ಸಿಐಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸುತ್ತಿದೆ.
ಇದನ್ನೂ ಓದಿ: T20 World Cup 2024: ಪಾಕ್ ಉಗ್ರರ ಭೀತಿ; ಬಿಗಿ ಭದ್ರತೆ ಕೈಗೊಂಡ ವಿಂಡೀಸ್ ಕ್ರಿಕೆಟ್ ಮಂಡಳಿ