ಹೈದ್ರಾಬಾದ್, ತೆಲಂಗಾಣ: ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟು, ರಾಷ್ಟ್ರ ರಾಜಕಾರಣದಲ್ಲಿ ಒಂದು ಕೈ ನೋಡುವ ಹುಮ್ಮಸ್ಸಿನಲ್ಲಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (cm k chandrashekar rao) ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಯಾಕೆಂದರೆ, ಅವರ ಭಾರತ್ ರಾಷ್ಟ್ರ ಸಮಿತಿ(Bharat Rahtra Samithi – BRS)ಯ ಸುಮಾರು 35ಕ್ಕೂ ಹೆಚ್ಚು ಪ್ರಮುಖ ನಾಯಕರು ಕಾಂಗ್ರೆಸ್ (Telangana Congress) ಸೇರ್ಪಡೆಯಾಗಲು ಸನ್ನದ್ಧರಾಗಿದ್ದಾರೆ! ಆಂಧ್ರ ಪ್ರದೇಶವನ್ನು ವಿಭಜಿಸಿದ ಬಳಿಕ ಕಾಂಗ್ರೆಸ್ (Congress Party), ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಹಾಗಾಗಿ, ಸದ್ಯದಲ್ಲಿ ಚುನಾವಣೆಗೆ ಹೋಗಲಿರುವ ತೆಲಂಗಾಣದಲ್ಲಿ ಬಿಆರ್‌ಎಸ್‌ನ ಹಲವು ನಾಯಕರು ಕಾಂಗ್ರೆಸ್ ಪಕ್ಷದ ಪಾಲಾಗುತ್ತಿರುವುದು ಆ ಪಕ್ಷಕ್ಕೆ ಸಕಾರಾತ್ಮಕ ಬೆಳವಣಿಗೆಯಾಗಿದೆ.
ಮಾಜಿ ಬಿಆರ್‌ಎಸ್ ನಾಯಕ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ರಾಜ್ಯದ ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್ ನೇತೃತ್ವದ ಗುಂಪು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಈ ಸಂಬಂಧ ಭೇಟಿ ಮಾಡಿ ಚರ್ಚೆ ನಡೆಸಿದೆ ಎಂದು ತಿಳಿದು ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದೆಯಾದರೆ ಶೀಘ್ರವೇ 35ಕ್ಕೂ ಹೆಚ್ಚು ಪ್ರಮುಖ ನಾಯಕರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ಇದರಿಂದ ಬಿಆರ್‌ಎಸ್‌ಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈಗ ಗೊತ್ತಾಗಿರುವ ಮಾಹಿತಿಗಳ ಪ್ರಕಾರ, ಈ ಇಬ್ಬರು ನಾಯಕರು ಜುಲೈ ಮೊದಲ ವಾರದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅಂದು ಬೃಹತ್ ಸಾರ್ವಜನಿಕ ಸಮಾರಂಭವನ್ನೂ ಏರ್ಪಡಿಸಲಾಗುತ್ತಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಮುಂಬರುವ ದಿನಗಳಲ್ಲಿ ಭಾರತ್ ರಾಷ್ಟ್ರ ಸಮಿತಿ ಹಾಗೂ ಬಿಜೆಪಿಯ ಇನ್ನಷ್ಟು ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ.
ಈ ಸುದ್ದಿಯನ್ನೂ ಓದಿ: Rice Politics: ತೆಲಂಗಾಣದಲ್ಲೂ ಅಕ್ಕಿ ಇಲ್ವಂತೆ; 7-8 ಕೆಜಿಗೆ ಇಳಿಯುತ್ತಾ ಅನ್ನಭಾಗ್ಯ?
ತೆಲಂಗಾಣ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷಾಂತರ ಈಗಾಗಲೇ ಶುರುವಾಗಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ ಎದುರು ಮಂಕಾಗಿದ್ದ ಕಾಂಗ್ರೆಸ್ ಈಗ ಮತ್ತೆ ಪುನಃಶ್ಚೇತನ ಹಾದಿಯಲ್ಲಿದೆ. ಪಕ್ಕದ ಕರ್ನಾಟಕದ ಚುನಾವಣಾ ಫಲಿತಾಂಶವು ತೆಲಂಗಾಣದ ಮೇಲೂ ಆಗಿದ್ದು, ಅನೇಕ ನಾಯಕರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.