ನವದೆಹಲಿ: ರಾಮಜನ್ಮಭೂಮಿ ಎನಿಸಿಕೊಂಡಿರುವ ಉತ್ತರ ಪ್ರದೇಶದ ಅಯೋಧ್ಯೆಗೆ ಇಂದು(ಜ.1) ಸುಮಾರು 50 ಲಕ್ಷ ಜನರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ(New Year 2023).
2022ರ ಜನವರಿ 1ರಂದು ಅಯೋಧ್ಯೆಗೆ 30 ಲಕ್ಷ ಜನರು ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ವರ್ಷ ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗಿ ಅದು 50 ಲಕ್ಷವನ್ನೂ ಮೀರಬಹುದು ಎಂದು ಅಧಿಕಾರಿಗಳು ಲೆಕ್ಕ ಹಾಕಿದ್ದಾರೆ. ಭಕ್ತಾಧಿಗಳ ಜನಸಂದಣಿಯನ್ನು ತಪ್ಪಿಸುವುದಕ್ಕಾಗಿ ಅಗತ್ಯ ತಯಾರಿಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ವಿವಿಧ ಸರ್ಕಾರಿ ಇಲಾಖೆಗಳ ವರದಿಗಳನ್ನು ಅವಲಂಬಿಸಿ, ಹೊಸ ವರ್ಷದ ಮೊದಲ ದಿನದಂದು ಅಯೋಧ್ಯೆಯಲ್ಲಿ ಸುಮಾರು 50 ಲಕ್ಷ ಜನರನ್ನು ನಿರ್ವಹಿಸಲು ನಾವು ಸಿದ್ಧರಾಗಿದ್ದೇವೆ. ಸುಮಾರು ಹನ್ನೆರಡು ಕ್ರೇನ್‌ಗಳನ್ನು ವ್ಯವಸ್ಥೆಗೊಳಿಸಿದ್ದೇವೆ. ಯಾವುದೇ ರಸ್ತೆ ಅಪಘಾತಗಳನ್ನು ಎದುರಿಸಲು ಅಯೋಧ್ಯೆಗೆ ಹೋಗುವ ಎಲ್ಲಾ ರಸ್ತೆಗಳಲ್ಲಿ, ಎಲ್ಲ ರೀತಿಯ ಸಾಧನಗಳನ್ನು ಹೊಂದಿರುವ ತುರ್ತು ರೆಸ್ಪಾನ್ಸ್ ವಾಹನಗಳನ್ನು ಸಿದ್ಧತೆಯಲ್ಲಿಡಲಾಗಿದೆ ಎಂದು ಅಯೋಧ್ಯೆಯ ಹಿರಿಯ ಪೊಲೀಸ್ ಅಧೀಕ್ಷಕ(ಎಸ್ಎಸ್‌ಪಿ) ಮುನಿರಾಜ್ ಜಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ | ಅಯೋಧ್ಯಾ ರಾಮಮಂದಿರಕ್ಕೆ 2024ರ ಜನವರಿಯಿಂದ ಭಕ್ತರಿಗೆ ಪ್ರವೇಶ; ಸಂಕ್ರಾಂತಿಯಂದೇ ರಾಮಲಲ್ಲಾ ಪ್ರತಿಷ್ಠಾಪನೆ