Site icon Vistara News

Ashok Choudhary: ದೇಶದ ಮುಸ್ಲಿಮರಲ್ಲಿ 90% ಜನ ಮತಾಂತರಗೊಂಡವರು; ಇವರಲ್ಲಿ ದಲಿತರೇ ಹೆಚ್ಚು; ಬಿಹಾರ ಸಚಿವ ವಿವಾದ

Ashok Choudhary

Ashok Choudhary

ಪಟನಾ: ಬಿಹಾರದಲ್ಲಿ ಆಡಳಿತಾರೂಢ ಪಕ್ಷದ ನಾಯಕರು, ಸಚಿವರು, ಸರ್ಕಾರದ ಭಾಗವಾಗಿರುವವರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಹಿಂದುಗಳ ಪವಿತ್ರ ಗ್ರಂಥ ರಾಮಚರಿತಮಾನಸದ ಕುರಿತು ಶಿಕ್ಷಣ ಸಚಿವ ಡಾ.ಚಂದ್ರಶೇಖರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಾದ ಬಳಿಕ ಮಾಜಿ ಸಿಎಂ ಜಿತನ್‌ ರಾಮ್‌ ಮಾಂಝಿ ಅವರೂ ರಾಮಾಯಣದ ಕುರಿತು ಮಾತನಾಡಿದ್ದರು. ಈಗ ಜೆಡಿಯು ನಾಯಕರಾದ, ಕಟ್ಟಡ ನಿರ್ಮಾಣ ಖಾತೆ ಸಚಿವರೂ ಆದ ಅಶೋಕ್‌ ಚೌಧರಿ (Ashok Choudhary:) ಅವರು, “ಭಾರತದಲ್ಲಿರುವ ಶೇ.90ರಷ್ಟು ಮುಸ್ಲಿಮರು ಮತಾಂತರಗೊಂಡವರು” ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ನಳಂದಾ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಭಾರತದಲ್ಲಿರುವ ಶೇ.90ರಷ್ಟು ಮುಸ್ಲಿಮರು ಮತಾಂತರಗೊಂಡವರಾಗಿದ್ದಾರೆ. ದಲಿತರು ಜಾತಿವಾದದ ಕಿರುಕುಳ ಸಹಿಸಲಾಗದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು” ಎಂದು ಹೇಳಿದರು. ಹಾಗೆಯೇ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ” ಬಿಜೆಪಿಯು ಯಾವಾಗಲೂ ಹಿಂದು-ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ” ಎಂದರು.

ರಂಜಾನ್‌ ಹಿನ್ನೆಲೆ ಮುಸ್ಲಿಂ ನೌಕರರಿಗೆ ವಿಶೇಷ ವಿನಾಯಿತಿ

ರಂಜಾನ್‌ ಹಿನ್ನೆಲೆಯಲ್ಲಿ ಬಿಹಾರದ ಮುಸ್ಲಿಂ ನೌಕರರಿಗೆ ರಾಜ್ಯ ಸರ್ಕಾರವು ವಿಶೇಷ ಸವಲತ್ತು ನೀಡಿದೆ. ಮುಸ್ಲಿಂ ನೌಕರರು ಕಚೇರಿಗೆ ನಿಗದಿತ ಅವಧಿಗಿಂತ ಒಂದು ಗಂಟೆ ಮೊದಲು ಬಂದು ನಿಗದಿತ ಅವಧಿಗಿಂತ ಒಂದು ಗಂಟೆ ಮೊದಲು ಕಚೇರಿಯಿಂದ ತೆರಳಬಹುದು ಎಂಬುದಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದು ಬಿಜೆಪಿ ಹಾಗೂ ಜೆಡಿಯು ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

ರಾಮಾಯಣವನ್ನು (Ramayana) ಆಧಾರವಾಗಿಟ್ಟುಕೊಂಡು ರಚಿತವಾಗಿರುವ, ಹಿಂದೂ ಧರ್ಮದ ಪವಿತ್ರ ಗ್ರಂಥ ರಾಮಚರಿತಮಾನಸವು (Ramcharitmanas) ಸಮಾಜದದಲ್ಲಿ ದ್ವೇಷವನ್ನು ಹರಡುತ್ತಿದೆ ಎಂದು ಹೇಳಿ ಬಿಹಾರ ಶಿಕ್ಷಣ ಸಚಿವ ಡಾ. ಚಂದ್ರಶೇಖರ್ ಅವರು ಕೆಲ ದಿನಗಳ ಹಿಂದೆ ವಿವಾದ ಸೃಷ್ಟಿಸಿದ್ದರು. ಇವರ ಬಳಿಕ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ ಅವರೂ ತುಳಸಿದಾಸರು ರಚಿಸಿರುವ ರಾಮಚರಿತಮಾನಸದ ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.

ಇದನ್ನೂ ಓದಿ: Religious Conversion: ಶಿವಮೊಗ್ಗದಲ್ಲಿ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ; ಪಾದ್ರಿ ಸೇರಿ ಹಲವರು ಪೊಲೀಸ್‌ ವಶಕ್ಕೆ

“ರಾಮಾಯಣವು ಪೌರಾಣಿಕ ಸೃಷ್ಟಿಯಾಗಿದೆ. ಹಾಗೆ ನೋಡಿದರೆ, ಕಾಲ್ಪನಿಕ ಕತೆಯಲ್ಲಿಯೂ ರಾವಣನು ರಾಮನಿಗಿಂತ ಹೆಚ್ಚಿನ ಬೌದ್ಧಿಕ ಸಾಮರ್ಥ್ಯ ಹೊಂದಿದ್ದ. ನಾವು ರಾಮಾಯಣದ ಬಗ್ಗೆ ಮಾತನಾಡುವ ಜತೆಗೆ ರಾವಣನು ರಾಮನಿಗಿಂತ ಹೆಚ್ಚು ಪರಿಶ್ರಮಿಯಾಗಿದ್ದ, ಶ್ರೇಷ್ಠನಾಗಿದ್ದ ಎಂಬುದನ್ನು ಗಮನಿಸಬೇಕು. ಹಾಗೆಯೇ, ಕಾಲ್ಪನಿಕ ಪಾತ್ರಗಳಾದ ರಾಮ ಹಾಗೂ ರಾವಣರ ಬಗ್ಗೆ ಹೆಚ್ಚು ಮಾತನಾಡುವ ಬದಲು ಬಿಜೆಪಿಯು ಬಡವರ ಬಗ್ಗೆ ಹೆಚ್ಚು ಮಾತನಾಡಬೇಕು” ಎಂದು ಹೇಳಿದ್ದರು.

Exit mobile version