ನವದೆಹಲಿ: “ದೇಶದಲ್ಲಿ ಪ್ರೇಮವಿವಾಹಗಳೇ ವಿಚ್ಛೇದನ ಹೆಚ್ಚಾಗಲು ಕಾರಣ” ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ. ವೈವಾಹಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವರ್ಗಾವಣೆ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸಂಜಯ್ ಕರೋಲ್ ನೇತೃತ್ವದ ಪೀಠವು ಹೀಗೆ ಪ್ರತಿಪಾದನೆ ಮಾಡಿದೆ.
ಅರ್ಜಿಯ ವಿಚಾರಣೆ ವೇಳೆ ವಕೀಲರು, ದಂಪತಿಯದ್ದು ಪ್ರೇಮ ವಿವಾಹ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು. ಇದೇ ವೇಳೆ, ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, “ಪ್ರೀತಿಸಿ ಮದುವೆಯಾದವರೇ ಹೆಚ್ಚಿನ ಪ್ರಮಾಣದಲ್ಲಿ ವಿಚ್ಛೇದನ ಪಡೆಯುತ್ತಿದ್ದಾರೆ” ಎಂದು ಹೇಳಿದರು. ಮೊದಲು ನ್ಯಾಯಾಲಯವು ಇಬ್ಬರ ವಿಚ್ಛೇದನಕ್ಕೆ ಮಧ್ಯಸ್ಥಿಕೆ ಅಗತ್ಯ ಎಂದು ಹೇಳಿತ್ತು. ಆದರೆ, ಮಧ್ಯಸ್ಥಿಕೆಗೆ ಮಹಿಳೆಯ ಪತಿಯು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ನ್ಯಾಯಾಲಯ ಕೊನೆಗೆ ಮಧ್ಯಸ್ಥಿಕೆಗೆ ಸೂಚಿಸಿತು.
ಇದನ್ನೂ ಓದಿ: Viral Photos: ವಿಚ್ಛೇದನವನ್ನು ಹುಚ್ಚೆದ್ದು ಸಂಭ್ರಮಿಸಿ, ಮದುವೆ ಫೋಟೋಗಳನ್ನು ಹರಿದು ಚೂರು ಮಾಡಿದ ಯುವತಿ!
ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ವಿಚ್ಛೇದನ ಕುರಿತು ಮಹತ್ವದ ತೀರ್ಪು ನೀಡಿತ್ತು. ಗಂಭೀರ ಪ್ರಕರಣಗಳಲ್ಲಿ ಇಬ್ಬರ ಒಪ್ಪಿಗೆ ಇರದಿದ್ದರೂ, ವಿಚ್ಛೇದನಕ್ಕೆ ಪತಿ ಅಥವಾ ಪತ್ನಿ ವಿರೋಧ ವ್ಯಕ್ತಪಡಿಸಿದರೂ ವಿಚ್ಛೇದನ ನೀಡುವುದಾಗಿ ತಿಳಿಸಿತ್ತು. “ಯಾವುದೇ ಒಂದು ದಂಪತಿಯು ಇನ್ನು ಒಟ್ಟಿಗೆ ಜೀವನ ಸಾಗಿಸಲು ಆಗುವುದಿಲ್ಲ, ಭಾವನಾತ್ಮಕವಾಗಿ ಸಂಬಂಧ ಸತ್ತಿದೆ ಎಂಬುದು ಸಾಬೀತಾದರೆ, ರಾಜಿ ಸಂಧಾನದಿಂದ ಉಪಯೋಗವಿಲ್ಲ ಎಂಬಂತಾದರೆ, ಪತಿ ಅಥವಾ ಪತ್ನಿಯ ವಿರೋಧವಿದ್ದರೂ ವಿಚ್ಛೇದನ ನೀಡುವುದಾಗಿ” ಪಂಚ ಸದಸ್ಯರ ಪೀಠ ಹೇಳಿತ್ತು.