ಭೋಪಾಲ್: “ಪ್ರಪಂಚದಲ್ಲೇ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ” ಎಂಬುದು ಸಿನಿಮಾ ಡೈಲಾಗ್‌ಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬ ತಾಯಿಯೂ ತನ್ನ ಮಗುವನ್ನು ಪೊರೆಯಲು, ರಕ್ಷಿಸಲು ಒಂದಲ್ಲ ಒಂದು ರೀತಿ ಹೋರಾಟ, ತ್ಯಾಗ ಮಾಡಿಯೇ ಇರುತ್ತಾಳೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ ತಾಯಿಯೊಬ್ಬಳು (Warrior Mother) ಹುಲಿಯ ಜತೆ 20 ನಿಮಿಷ ಹೋರಾಡಿ ಮಗನನ್ನು ರಕ್ಷಿಸಿದ್ದಾಳೆ.
ಮಧ್ಯಪ್ರದೇಶದ ಬಂಧವಗಢ ಅರಣ್ಯ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಮನ್‌ಪುರ ಗ್ರಾಮದ ಬಳಿ ಭಾನುವಾರ ಬೆಳಗ್ಗೆ ತನ್ನ 15 ತಿಂಗಳ ಮಗುವಿನ ಜತೆ ಕಾಡಿನ ಬಳಿ ತೆರಳಿದ್ದಾರೆ. ಇದೇ ವೇಳೆ ಹಸಿದು ಕೂತಿದ್ದ ಹುಲಿಯೊಂದು ಇಬ್ಬರ ಮೇಲೂ ಎರಗಿದ್ದು, ಮೊದಲು ಮಗುವಿಗೆ ಬಾಯಿ ಹಾಕಿದೆ. ಇದರಿಂದ ಕೆರಳಿದ ಮಹಿಳೆಯು ಹುಲಿಯ ಜತೆ ಸುಮಾರು 20 ನಿಮಿಷ ಹೋರಾಡಿ ಮಗನನ್ನು ರಕ್ಷಿಸಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಹಿಳೆಯ ಪ್ರತಿರೋಧದಿಂದ ಕೆರಳಿದ ಹುಲಿಯು ತಾಯಿ ಮೇಲೆ ಎರಗಿದೆ. ಉಗುರಿನಿಂದ ಆಕೆಯ ಮೈ ಪರಚಿದೆ. ಇದೇ ವೇಳೆ ಸುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದ ವಿಚಲಿತಗೊಂಡ ಹುಲಿಯು ಕಾಡಿನೊಳಗೆ ಪೇರಿಕಿತ್ತಿದೆ. ಹುಲಿಯ ದಾಳಿಯಿಂದ ಗಾಯಗೊಂಡ ಮಹಿಳೆಯನ್ನು ಜಬಲ್ಪುರ ಆಸ್ಪತ್ರೆಗೆ ದಾಖಲಿಸಿದ್ದು, ತಾಯಿ ಹಾಗೂ ಮಗು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ತನ್ನ ಕರುಳ ಕುಡಿಯನ್ನು ರಕ್ಷಿಸಲು ಹುಲಿಯ ಜತೆ ಹೋರಾಡಿದ ಮಹಿಳೆಯ ಶೌರ್ಯವನ್ನು ಸುತ್ತಮುತ್ತಲಿನ ಜನ ಕೊಂಡಾಡಿದ್ದಾರೆ.
ಇದನ್ನೂ ಓದಿ | ತಾಯಿ ಮೃತಪಟ್ಟು 1 ವರ್ಷವಾಗುವ 1 ದಿನ ಮೊದಲು ಆತ್ಮಹತ್ಯೆ ಮಾಡಿಕೊಂಡ ಯುವಕ