Site icon Vistara News

Shivraj Singh Chouhan: ಬಿಜೆಪಿಯಿಂದ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್‌ ನಿರ್ಲಕ್ಷ್ಯ! ಸಿಎಂ ಅಭ್ಯರ್ಥಿ ಘೋಷಣೆ ಇಲ್ಲ

shivaraj singh chouhan

Madhya Pradesh Assembly Election Results 2023: BJP Leads, Will Cross Majority Mark?

ನವದೆಹಲಿ: ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Madhya Pradesh CM Shivraj Singh Chouhan) ಅವರನ್ನು ನಿರ್ಲಕ್ಷಿಸಲಾಗುತ್ತಿದೆಯೇ? ಇಂಥದೊಂದು ಅನುಮಾನ ಮೂಡಲು ಕಾರಣವಿದೆ. ವರ್ಷಾಂತ್ಯಕ್ಕೆ ನಡೆಯಲಿರುವ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ (Madhya Pradesh Assembly Election) ಸಿಎಂ ಚೌಹಾಣ್ ಅವರಿಗೆ ಬಿಜೆಪಿ (BJP) ಟಿಕೆಟ್ ನಿರಾಕರಿಸಲಾಗುತ್ತಿದೆ ಎಂದ ವರದಿಗಳು ಜೋರಾಗಿವೆ. ಹಾಗಿದ್ದೂ, ಪಕ್ಷವೂ ಸುದ್ದಿಯನ್ನು ತಳ್ಳಿ ಹಾಕಿದೆ. ಆದರೆ, ಚುನಾವಣೆ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಆದ್ಯತೆ ದೊರೆಯುವುದು ಅಷ್ಟಕಷ್ಟೇ. ಅಂದರೆ, ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಈ ಬಾರಿ ದೊಡ್ಡ ನಾಯಕರೊಬ್ಬರು ಮುಖ್ಯಮಂತ್ರಿ ಹುದ್ದೆಗೇರುವ ಎಲ್ಲ ಸಾಧ್ಯತೆಗಳಿವೆ. ಈ ಮಧ್ಯೆ, ಚುನಾವಣಾ ಪ್ರಚಾರದ ವೇಳೆ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸೈಡ್‌ಲೈನ್ ಮಾಡುತ್ತಿರುವುದು ಕೂಡ ಎದ್ದು ಕಾಣುತ್ತಿದೆ. ಮತ್ತೊಂದೆಡೆ ಭಾರತೀಯ ಜನತಾ ಪಾರ್ಟಿಯು ಹಿಂದಿ ಭಾಷಿಕ ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರಲು ನಿರ್ಧರಿಸಿದೆ(No CM Candidate).

ಮಧ್ಯ ಪ್ರದೇಶದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿಯು ಈವರೆಗೆ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ರಿಲೀಸ್ ಮಾಡಿದೆ. ಕೇಂದ್ರ ಸಚಿವರಾದ ನರೇಂದ್ರ ತೋಮರ್, ಪ್ರಹ್ಲಾದ್ ಪಟೇಲ್ ಮತ್ತು ಫಗ್ಗನ್ ಸಿಂಗ್ ಕುಲಸ್ತೆ ಅವರಿಗೂ ಟಿಕೆಟ್ ನೀಡಲಾಗಿದೆ. ಜತೆಗೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ್ ಅವರೂ ಸ್ಪರ್ಧಿಸಲು ಸೂಚಿಸಲಾಗಿದೆ. ಈ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದರೆ ಬಿಜೆಪಿ ಈಗಾಗಲೇ ಸೋಲನ್ನು ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕೆಲವು ಮೂಲಗಳ ಪ್ರಕಾರ, ಕೇಂದ್ರ ಸಚಿವರು ಮತ್ತು ಸಂಸದರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿಯು ಮಧ್ಯ ಪ್ರದೇಶ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ಮುಂದಾಗಿದೆ ಎನ್ನಲಾಗಿದೆ. ಹಾಗಾಗಿ, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಈ ಚುನಾವಣೆಯಲ್ಲಿ ಮನ್ನಡೆ ದೊರೆಯವುದು ಅಷ್ಟು ಸುಲಭವಲ್ಲ. ಜತೆಗೆ ಪಕ್ಷದೊಳಗಿನ ಸ್ವಜನಪಕ್ಷಪಾತವನ್ನು ಕಡಿಮೆ ಮಾಡುವುದರ ಜತೆಗೆ, ಕ್ಷೇತ್ರಗಳನ್ನು ಗೆಲ್ಲುವ ಸಾಮರ್ಥ್ಯ ಇರುವ ಮತ್ತು ಪ್ರಾದೇಶಿಕ ನಾಯಕರಿಗೆ ಮಣೆ ಹಾಕಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಸುದ್ದಿಯನ್ನೂ ಓದಿ: MP Assembly Election: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್, ಮೂವರು ಕೇಂದ್ರ ಸಚಿವರು, ಹಲವು ಸಂಸದರು ಕಣಕ್ಕೆ!

ಮುಖ್ಯಮಂತ್ರಿಗಳ ಅಭ್ಯರ್ಥಿಗಳ ಘೋಷಣೆ ಇಲ್ಲ

ಭಾರತೀಯ ಜನತಾ ಪಾರ್ಟಿಯು ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವಾಗಿ ಹಿಂದಿ ಭಾಷಿಕ ರಾಜ್ಯಗಳಾದ ಛತ್ತೀಸ್‌ಗಢ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಸಾಮೂಹಿಕ ನಾಯಕತ್ವಕ್ಕೆ ಹೆಚ್ಚಿನ ಮನ್ನಣೆ ನೀಡಲು ಬಿಜೆಪಿ ಮುಂದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ಮಧ್ಯೆ, ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಈವರೆಗೆ ಎರಡು ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಆದರೆ, ಈ ಎರಡರಲ್ಲೂ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಹೆಸರಿಲ್ಲ. ಹಾಗಾಗಿ, ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೊಕ್ ನೀಡಲಾಗುತ್ತಿದೆ ಎಂಬ ಅನುಮಾನಗಳು ಎದ್ದಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version