ಭೋಪಾಲ್: ವಯಸ್ಸಿಗೆ ಬಂದ ಮಗ ಅಗಲಿದರೆ, ಮಕ್ಕಳು ಚಿಕ್ಕವರಾಗಿದ್ದಾಗಲೇ ಅಪಘಾತದಲ್ಲಿ ಮೃತಪಟ್ಟರೆ, ಎಂತಹ ದುರ್ವಿಧಿ ಎಂದು ಮರಗುತ್ತೇವೆ. ಅವರ ಬಗ್ಗೆ ಕರುಣೆ ತೋರುತ್ತೇವೆ. ಇಂತಹದ್ದೇ ಕರುಣಾಜನಕ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಅಪಘಾತದಲ್ಲಿ ಸಾವಿಗೀಡಾದ ತಾಯಿಯ ಅಂತ್ಯಸಂಸ್ಕಾರಕ್ಕೆ ಹೊರಟ ಮಗನೂ ಅಪಘಾತದಲ್ಲಿ (MP Double Tragedy) ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ಜಾತ್ರಿ ಗ್ರಾಮದ ರಾಣಿ ದೇವಿ (55) ಎಂಬುವವರು ಆಗಸ್ಟ್ 9ರಂದು ಕಿರಿಯ ಮಗನ ಜತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಬೈಕ್ ಗುದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕಿರಿಯ ಮಗನು ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ತಾಯಿ ಮೃತಪಟ್ಟ ವಿಷಯವು ಇಂದೋರ್‌ನಲ್ಲಿದ್ದ ಸೂರಜ್ ಸಿಂಗ್ (22) ಅವರಿಗೆ ಗೊತ್ತಾಗಿದೆ. ರೇವಾದಿಂದ ಇಂದೋರ್‌ಗೆ 830 ಕಿಲೋಮೀಟರ್ ದೂರವಿದ್ದು, ಖಾಸಗಿ ಟ್ಯಾಕ್ಸಿಯಲ್ಲಿ ಗ್ರಾಮದತ್ತ ಹೊರಡುತ್ತಾನೆ. ಆದರೆ, ಆಗಸ್ಟ್ 10ರಂದು ತನ್ನ ಊರಿನಿಂದ 100 ಕಿಲೋಮೀಟರ್ ದೂರದಲ್ಲಿದ್ದಾಗ ಟ್ಯಾಕ್ಸಿಯ ಟೈರ್ ಸ್ಫೋಟವಾಗಿದೆ. ಇದರಿಂದಾಗಿ ಆತನೂ ಮೃತಪಟ್ಟಿದ್ದಾನೆ.
ಇದನ್ನೂ ಓದಿ: Road Accident : ಭೀಕರ ಅಪಘಾತ; ಶನಿ ದೇವಸ್ಥಾನಕ್ಕೆ ಬೈಕ್‌ನಲ್ಲಿ ಹೊರಟಿದ್ದ ಇಬ್ಬರು ಬಾಲಕರ ದಾರುಣ ಸಾವು, ಒಬ್ಬ ಗಂಭೀರ
ಟ್ಯಾಕ್ಸಿಯ ಕಾರು ಸ್ಫೋಟವಾಗುತ್ತಲೇ ರಸ್ತೆ ಬದಿ ನಿಂತಿದ್ದ ಕಾರಿಗೆ ಟ್ರಕ್ ಗುದ್ದಿದೆ. ಅಪಘಾತದ ತೀವ್ರತೆಗೆ ಸೂರಜ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ರಾಣಿ ದೇವಿ ಅವರ ಪತಿಯು ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ಅವರು ಗ್ರಾಮದಲ್ಲಿ ಹಿರಿಯ ಹಾಗೂ ಕಿರಿಯ ಮಗನ ಜತೆ ವಾಸಿಸುತ್ತಿದ್ದರು. ಸೂರಜ್ ಸಿಂಗ್ ಇಂದೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಆದರೆ, ಕೇವಲ 12 ಗಂಟೆಯಲ್ಲಿ ಇಬ್ಬರೂ ಅಪಘಾತದಲ್ಲಿ ಮೃತಪಟ್ಟಿರುವುದು ದುರ್ದೈವದ ಸಮಗತಿಯಾಗಿದೆ.