Site icon Vistara News

ಕುರುಡು ಕಾಂಚಾಣ; ಮಧ್ಯಪ್ರದೇಶದಲ್ಲಿ ಚುನಾವಣೆ ವೇಳೆ 340 ಕೋಟಿ ರೂ. ಜಪ್ತಿ

500 Rupees Notes Seized

MP Election 2023: Cash, drugs, jewellery worth ₹340 crore seized during model code of conduct period

ಭೋಪಾಲ್‌: ದೇಶದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆವರೆಗೆ ಚುನಾವಣೆ ವೇಳೆ ದುಡ್ಡಿನ ಹೊಳೆಯೇ ಹರಿಯುತ್ತದೆ ಎಂಬುದು ಬಹಿರಂಗ ಸತ್ಯವಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ನೂರಾರು ಕೋಟಿ ರೂಪಾಯಿಯನ್ನು ಜಪ್ತಿ ಮಾಡುವುದು ಸರ್ವೇಸಾಮಾನ್ಯವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ (Madhya Pradesh Assembly Election) ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ (Model Code Of Conduct) ಜಾರಿಯಾದ ಬಳಿಕ ಇದುವರೆಗೆ 340 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಸೇರಿ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

“ಮಧ್ಯಪ್ರದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ 40.18 ಕೋಟಿ ರೂ. ನಗದು, 65.56 ಕೋಟಿ ರೂ. ಮೌಲ್ಯದ ಕಳ್ಳಭಟ್ಟಿ ಸಾರಾಯಿ, 17.25 ಕೋಟಿ ರೂ. ಮೌಲ್ಯದ ಮಾದಕವಸ್ತು ಅಥವಾ ಡ್ರಗ್ಸ್‌, 92.76 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಹಾಗೂ 124 ಕೋಟಿ ರೂ. ಮೌಲ್ಯದ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ” ಎಂದು ಮುಖ್ಯ ಚುನಾವಣಾಧಿಕಾರಿ ಅನುಪಮ್‌ ರಾಜನ್‌ ಮಾಹಿತಿ ನೀಡಿದರು. ರಾಜ್ಯಾದ್ಯಂತ ಚೆಕ್‌ಪೋಸ್ಟ್‌, ಟೋಲ್‌ಗೇಟ್‌ ಸೇರಿ ಹಲವೆಡೆ ಅಧಿಕಾರಿಗಳು ಹಣ, ಚಿನ್ನಾಭರಣ ಸೇರಿ ಹಲವು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್‌ 17ರಂದು ಚುನಾವಣೆ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಇದ್ದು, ಯಾವ ಪಕ್ಷ ಅಧಿಕಾರದ ಗದ್ದುಗೆಗೆ ಏರಲಿದೆ ಎಂಬ ಕುತೂಹಲ ಕೆರಳಿದೆ. ರಾಜ್ಯದಲ್ಲಿ ಶೇ.76ರಷ್ಟು ಮತದಾನ ದಾಖಲಾಗಿದ್ದು, ಡಿಸೆಂಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ. ಮಧ್ಯಪ್ರದೇಶದಲ್ಲಿ ಸದ್ಯ ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮುಖ್ಯಮಂತ್ರಿಯಾಗಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ; ಮಹಿಳೆ, ರೈತರಿಗೆ ಬಂಪರ್‌ ಯೋಜನೆ, ಹಗರಣ ತನಿಖೆಗೆ ಎಸ್ಐಟಿ

ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಇದೆ. ಅದರಲ್ಲೂ, ಕಳೆದ ಬಾರಿ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆದಿದ್ದ ಕಾಂಗ್ರೆಸ್‌ಅನ್ನು ಬಿಜೆಪಿ ಓವರ್‌ಟೇಕ್‌ ಮಾಡಿ ಅಧಿಕಾರ ಹಿಡಿದಿದೆ. ಈಗ ಮತ್ತೆ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆಯೇರಲು ಕಾಂಗ್ರೆಸ್‌ ಇನ್ನಿಲ್ಲದ ರಣತಂತ್ರ ರೂಪಿಸಿದೆ. ಮತ್ತೊಂದೆಡೆ, ಕಳೆದ ಬಾರಿ ಸಾಧಿಸದ ಬಹುಮತವನ್ನು ಈ ಬಾರಿ ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಹಾಗಾಗಿ, ಈ ಬಾರಿಯ ಚುನಾವಣೆಯು ತೀವ್ರ ಹಣಾಹಣಿಯಿಂದ ಕೂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version