ದೆಹಲಿ ರಾಷ್ಟ್ರಪತಿ ಭವನದ ಆವರಣದೊಳಗೆ ಇರುವ ಉದ್ಯಾನವನದ ಹೆಸರನ್ನು ಕೇಂದ್ರ ಸರ್ಕಾರ ಬದಲಿಸಿದೆ. ಈಗಾಗಲೇ ಹಲವು ಮಹತ್ವದ ಸ್ಥಳಗಳಿಗೆ ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರ ಈಗ ರಾಷ್ಟ್ರಪತಿ ಭವನದ ‘ಮೊಘಲ್ ಗಾರ್ಡನ್’ (Mughal Garden) ಹೆಸರನ್ನು ‘ಅಮೃತ್ ಉದ್ಯಾನ (Amrit Udyan)’ ಎಂದು ಬದಲಿಸಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಪರಿಕಲ್ಪನೆಯಡಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕೇಂದ್ರ ಸರ್ಕಾರ ಈಗ, ಈ ಅಭಿಯಾನದ ಭಾಗವಾಗಿ ಮೊಘಲ್ ಗಾರ್ಡನ್ ಹೆಸರನ್ನು ತೆಗೆದು, ‘ಅಮೃತ್ ಉದ್ಯಾನ’ ಎಂದು ಮರುನಾಮಕರಣ ಮಾಡಿದೆ.
ಮೊಘಲ್ ಗಾರ್ಡನ್ ಹೆಸರು ಬದಲಾದ ಬಗ್ಗೆ ಮಾಹಿತಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪ ಮಾಧ್ಯಮ ಕಾರ್ಯದರ್ಶಿ ನವಿಕಾ ಗುಪ್ತಾ ‘ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಮೊಘನ್ ಗಾರ್ಡನ್ಗೆ ಅಮೃತ್ ಉದ್ಯಾನ ಎಂದು ಹೆಸರು ಬದಲಿಸಲು ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ಬಗೆಬಗೆಯ ಹೂವುಗಳಿಂದ ಕಂಗೊಳಿಸುವ ಈ ಉದ್ಯಾನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಇಲ್ಲಿ ಸುಮಾರು 159 ಬಗೆಯ ಗುಲಾಬಿ ಹೂವುಗಳಿವೆ. ಹೊಸದಾಗಿ ನಾಮಕರಣಗೊಂಡಿರುವ ಅಮೃತ್ ಉದ್ಯಾನವನ್ನು ಜನವರಿ 29, ಭಾನುವಾರದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸುವರು. ಅದಾದ ಮೇಲೆ ಜನವರಿ 31ರಿಂದ ಮಾರ್ಚ್ 26ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುತ್ತದೆ.
ಇದನ್ನೂ ಓದಿ: Mysuru : ಗ್ಲಾಸ್ ಹೌಸ್‌ನಲ್ಲಿ ತಲೆ ಎತ್ತಲಿದೆ ರಾಷ್ಟ್ರಪತಿ ಭವನ
ಮೊಘಲರ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾದ ಈ ಉದ್ಯಾನವನ ಅತ್ಯಂತ ಸುಂದರವಾಗಿದ್ದು, ಇದರ ವಿನ್ಯಾಸ ಕಾರ ಸರ್ ಎಡ್ವಿನ್ ಲುಟಿಯೆನ್ಸ್. ಉದ್ಯಾನದಲ್ಲಿ ಒಟ್ಟು ಆರು ಕಡೆಗಳಲ್ಲಿ ಕಮಲಾಕೃತಿಯ ಕಾರಂಜಿಗಳು ಇವೆ. ಇವುಗಳಿಂದ ನೀರು ಸುಮಾರು 12 ಅಡಿ ಎತ್ತರದವರೆಗೆ ಚಿಮ್ಮಬಲ್ಲದು. ಅಂದಹಾಗೇ, ಈ ಉದ್ಯಾನವನ ವರ್ಷಪೂರ್ತಿ ತೆರೆದಿರುವುದಿಲ್ಲ. ಪ್ರತಿವರ್ಷ ಫೆಬ್ರವರಿಯಿಂದ ಮಾರ್ಚ್ವರೆಗೆ, ಎರಡು ತಿಂಗಳು ಮಾತ್ರ ಉದ್ಯಾನವನಕ್ಕೆ ಪ್ರವಾಸಿಗರು ಭೇಟಿ ನೀಡಬಹುದು. ಫೆಬ್ರವರಿ-ಮಾರ್ಚ್ ಎಂದರೆ ಸಾಮಾನ್ಯವಾಗಿ ಹೂವುಗಳು ಅರಳಿ ನಿಲ್ಲುವ ಕಾಲವಾಗಿದ್ದರಿಂದ, ಈ ಉದ್ಯಾನವನದ ಸೌಂದರ್ಯದ ಗುಟ್ಟೇ ಹೂವುಗಳು ಆಗಿದ್ದರಿಂದ ಫೆಬ್ರವರಿ-ಮಾರ್ಚ್ ತಿಂಗಳು ಹೊರತುಪಡಿಸಿ ಇನ್ಯಾವುದೇ ತಿಂಗಳಲ್ಲಿ ಇದು ತೆರೆಯುತ್ತಿರಲಿಲ್ಲ. ಆದರೆ ಈಗ ಮರುನಾಮಕರಣ ಮಾಡಿದ ಬೆನ್ನಲ್ಲೇ, ಸರ್ಕಾರ ಒಂದಷ್ಟು ಬದಲಾವಣೆ ಮಾಡುವ ಚಿಂತನೆ ನಡೆಸಿದೆ. ಸಾಮಾನ್ಯ ನಾಗರಿಕರು ಇಲ್ಲಿ ಪ್ರವಾಸಕ್ಕೆ ಬರಲು ಎರಡೇ ತಿಂಗಳು ಅವಕಾಶ ಕಲ್ಪಿಸಿದರೂ, ರೈತರು, ಅಂಗವಿಕಲರಿಗೆ ಈ ಉದ್ಯಾನ ವೀಕ್ಷಣೆಗೆ ಯಾವಾಗಲೂ ಅವಕಾಶ ಕಲ್ಪಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ ಎಂದೂ ನವಿಕಾ ಗುಪ್ತಾ ಮಾಹಿತಿ ನೀಡಿದ್ದಾರೆ.