Site icon Vistara News

Mujahideen: ತಮ್ಮನ್ನು ʼಮುಜಾಹಿದ್ದೀನ್‌ʼ ಎಂದ ಆಪ್‌ ವಕ್ತಾರೆ ವಿರುದ್ಧ ಕೇಸ್‌ ದಾಖಲಿಸಿದ ಬಿಜೆಪಿ ಮುಖಂಡ

Shehzad Poonawala and Priyanka Kakkar

ಹೊಸದಿಲ್ಲಿ: ಟಿವಿ ಚರ್ಚೆಯ ವೇಳೆ ತಮ್ಮನ್ನು ಮುಜಾಹಿದ್ದೀನ್‌ (Mujahideen) ಎಂದು ಕರೆದು, ವಿರುದ್ಧ ಕೋಮುವಾದಿ ಟೀಕೆಗಳನ್ನು ಮಾಡಿದ ಆಮ್‌ ಆದ್ಮಿ ಪಕ್ಷದ (aam admi party) ವಕ್ತಾರೆ ಪ್ರಿಯಾಂಕಾ ಕಕ್ಕರ್ (Priyanka Kakkar) ವಿರುದ್ಧ ಬಿಜೆಪಿಯ (bjp) ವಕ್ತಾರ ಶೆಹಜಾದ್ ಪೂನಾವಾಲಾ (Shehzad Poonawala) ದೂರು ದಾಖಲಿಸಿದ್ದಾರೆ.

ಜುಲೈ 25ರಂದು ಒಂದು ಖಾಸಗಿ ಚಾನೆಲ್‌ನಲ್ಲಿ ನಡೆದ ಟಿವಿ ಚರ್ಚೆಯ ಸಂದರ್ಭದಲ್ಲಿ ಪೂನಾವಾಲಾ ಅವರನ್ನು ಕಕ್ಕರ್‌ ʼಮುಜಾಹಿದ್ದೀನ್ʼ ಎಂದು ಕರೆದಿದ್ದರು. ತಮ್ಮ ಧಾರ್ಮಿಕ ನಂಬಿಕೆಯನ್ನು ಟೀಕಿಸಿದರು ಮತ್ತು “ಅತ್ಯಂತ ಕೋಮುವಾದಿ ಅರ್ಥವನ್ನು ಹೊಂದಿದʼ ಟೀಕೆಗಳನ್ನು ಮಾಡಿದರು ಎಂದು ಪೂನಾವಾಲಾ ನೀಡಿದ ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.

“ಕಕ್ಕರ್‌ ಈ ಹಿಂದೆಯೂ ಸಹ ಇಸ್ಲಾಂ ಧರ್ಮದ ವಿರುದ್ಧ, ನನ್ನ ನಂಬಿಕೆಯ ವಿರುದ್ಧ ಇಂತಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಕಾಮೆಂಟ್‌ಗಳು ಮುಸ್ಲಿಮರ ಬಗ್ಗೆ ಆಮ್ ಆದ್ಮಿ ಪಕ್ಷ ಹೊಂದಿರುವ ವಿಷಪೂರಿತ ಮತ್ತು ದ್ವೇಷ ತುಂಬಿದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿವೆ” ಎಂದು ಪೂನಾವಾಲಾ ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಕ್ಕರ್, “ಮುಜಾಹಿದೀನ್” ಅಥವಾ “ಶೆಹಜಾದ್” ಎಂದರೆ “ಭಯೋತ್ಪಾದಕ” ಎಂದರ್ಥವಲ್ಲ ಎಂದಿದ್ದಾರೆ. ಜತೆಗೆ, ಮುಖ್ಯಮಂತ್ರಿ ಕೇಜ್ರಿವಾಲ್‌ ಅವರನ್ನು “ಜಿಹಾದಿ” ಎಂದು ಉಲ್ಲೇಖಿಸಿದ್ದಕ್ಕಾಗಿ ಪೂನಾವಾಲಾ ಅವರನ್ನು ಟೀಕಿಸಿದರು. “ಶೆಹಜಾದ್ ಎಂದರೆ ಭಯೋತ್ಪಾದಕ ಎಂದರ್ಥವೇ? ಮುಜಾಹಿದ್ದೀನ್ ಎಂದರೆ ಭಯೋತ್ಪಾದಕ ಎಂದರ್ಥವೇ? ‘ಶೆಹಜಾದ್ ಮುಜಾಹಿದ್ದೀನ್’ ಎಂದರೆ ಭಯೋತ್ಪಾದಕನೇ? ಒಬ್ಬರು ಮುಖ್ಯಮಂತ್ರಿಯನ್ನು ʼಜಿಹಾದಿ’ ಎಂದು ಉಲ್ಲೇಖಿಸಲು ದೂರುದಾರರಿಗೆ ಅನುಮತಿ ಇದೆಯೇ? ದೂರುದಾರರು ತಮ್ಮ ರಾಜಕೀಯ ಎದುರಾಳಿಯನ್ನು ‘ಶಿಶು’ ಎಂದು ಕರೆಯುವುದು ಸರಿಯೇ?” ಎಂದು ಪೂನಾವಾಲಾ ಅವರು ಟ್ವೀಟ್ ಮಾಡಿದ್ದಾರೆ.

ಕಕ್ಕರ್ ವಿರುದ್ಧ ಭಾರತೀಯ ದಂಡ ಸಂಹಿತೆ 153ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 153 ಬಿ (ರಾಷ್ಟ್ರೀಯ ಏಕತೆಗೆ ವಿರುದ್ಧ ಅಪಕಲ್ಪನೆ ಬಿತ್ತುವುದು), 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಕೃತ್ಯಗಳು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಂದ ವಿವರಣೆಯನ್ನು ಕೋರಿ ಆಪ್‌ಗೆ ಶೋಕಾಸ್ ನೋಟಿಸ್ ನೀಡುವಂತೆ ಪೂನಾವಾಲಾ ಪೊಲೀಸರಿಗೆ ಮನವಿ ಮಾಡಿದ್ದಾರೆ. ಬುಧವಾರ ಕಕ್ಕರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.

Exit mobile version