ಮುಂಬೈ: ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರಿಗೆ ಅಕ್ಟೋಬರ್ 31 ಮತ್ತು ನವೆಂಬರ್ 1ರ ನಡುವೆ ಬೆದರಿಕೆಯ ಮತ್ತೆ ಎರಡು ಇ-ಮೇಲ್‌ಗಳು ಬಂದಿವೆ. ಹಿಂದಿನ ಇ-ಮೇಲ್‌ಗಳು ನಿರ್ಲಕ್ಷಿಸಿದ್ದಕ್ಕಾಗಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ಹಿಂದೆ ಬಂದಿದ್ದ ಇ-ಮೇಲ್‌ಗಳಲ್ಲಿ 400 ಕೋಟಿ ರೂ.ಗೆ (₹400 crore) ಬೇಡಿಕೆ ಇಡಲಾಗಿತ್ತು.
ಅಕ್ಟೋಬರ್ 27ರಂದು ಹಣಕ್ಕಾಗಿ ಬೇಡಿಕೆ ಸಲ್ಲಿಸಿ ಇ-ಮೇಲ್‌ಗಳನ್ನು ಕಳುಹಿಸಿದ ವ್ಯಕ್ತಿಯೇ ಮತ್ತೆ ಬೇಡಿಕೆ ಇಟ್ಟಿದ್ದಾನೆ ಎನ್ನುವುದು ಗಮನಾರ್ಹ. ʼʼಅಕ್ಟೋಬರ್ 31 ಮತ್ತು ನವೆಂಬರ್ 1ರ ನಡುವೆ ಮತ್ತೆರಡು ಜೀವ ಬೆದರಿಕೆ ಇ-ಮೇಲ್‌ಗಳು ಮುಕೇಶ್ ಅಂಬಾನಿ ಅವರಿಗೆ ಬಂದಿವೆ. ಇದರಲ್ಲಿ 400 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿ ಕಳುಹಿಸಿದ್ದ ಹಿಂದಿನ ಇ-ಮೇಲ್‌ಗಳನ್ನು ನಿರ್ಲಕ್ಷಿಸಿದ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಲಾಗಿದೆʼʼ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 27ರಂದು ಇ-ಮೇಲ್ ಕಳುಹಿಸಿದ್ದ ವ್ಯಕ್ತಿ 20 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಮತ್ತು ದುಡ್ಡು ನೀಡದಿದ್ದರೆ ಭಾರತದ ಅತ್ಯುತ್ತಮ ಶೂಟರ್ ಮೂಲಕ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ನಾವು ಭಾರತದ ಅತ್ಯುತ್ತಮ ಶೂಟರ್‌ಗಳನ್ನು ಹೊಂದಿದ್ದೇವೆ ಎಂದೂ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಅಂಬಾನಿ ನಿವಾಸ ʼಆಂಟಿಲಿಯಾʼದಲ್ಲಿನ ಭದ್ರತಾ ಅಧಿಕಾರಿಗಳು ಈ ಕುರಿತು ಗಾಮ್ದೇವಿ ಪೊಲೀಸರಿಗೆ ದೂರು ನೀಡಿದ್ದರು.
ಅಕ್ಟೋಬರ್ 28ರಂದು 200 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿ ಜೀವ ಬೆದರಿಕೆಯ ಇ-ಮೇಲ್ ಮತ್ತೆ ಬಂದಿತ್ತು. ಬಳಿಕ ಅಕ್ಟೋಬರ್ 30ರಂದು ದ್ವಿಗುಣ ಹಣ ನೀಡುವಂತೆ (400 ಕೋಟಿ ರೂ.) ಪುನಃ ಬೇಡಿಕೆ ಸಲ್ಲಿಸಲಾಗಿತ್ತು. ʼನಿಮ್ಮ ಭದ್ರತೆ ಎಷ್ಟೇ ಉತ್ತಮವಾಗಿದ್ದರೂ ನಮ್ಮ ಒಬ್ಬ ಸ್ನೈಪರ್ ನಿಮ್ಮನ್ನು ಕೊಲ್ಲಬಹುದು. ಈ ಬಾರಿ ನಮ್ಮ ಬೇಡಿಕೆ 400 ಕೋಟಿ ರೂ.ಗಳಾಗಿದ್ದು, ಪೊಲೀಸರು ನಮ್ಮನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಸಾಧ್ಯವಿಲ್ಲʼ ಎಂದು ಇ-ಮೇಲ್‌ನಲ್ಲಿ ಬರೆಯಲಾಗಿತ್ತು. ಹೀಗೆ ಮೇಲಿಂದ ಮೇಲೆ ಜೀವ ಬೆದರಿಕೆ ಇ-ಮೇಲ್ ಬರುತ್ತಿರುವುದು ಆತಂಕ ಸೃಷ್ಟಿಸಿದೆ.
ಮೊದಲ ಸಲವಲ್ಲ
ಮುಕೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆ ಬರುತ್ತಿರುವುದು ಇದು ಮೊದಲ ಸಲವೇನಲ್ಲ. ಹಿಂದೆಯೂ ಅನೇಕ ಬಾರಿ ಈ ರೀತಿಯ ಘಟನೆಗಳು ನಡೆದಿವೆ. ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಿ ಅನಾಮಧೇಯ ಕರೆ ಮಾಡಿದ ಬಿಹಾರ ಮೂಲದ ವ್ಯಕ್ತಿಯನ್ನು ಮುಂಬೈ ಪೊಲೀಸರು ಕಳೆದ ವರ್ಷ ಬಂಧಿಸಿದ್ದರು. ಕರೆ ಮಾಡಿದ ವ್ಯಕ್ತಿ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ದಕ್ಷಿಣ ಮುಂಬೈಯಲ್ಲಿರುವ ಅಂಬಾನಿ ಕುಟುಂಬದ ನಿವಾಸ ‘ಆಂಟಿಲಿಯಾ’ವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ.
ಇದನ್ನೂ ಓದಿ: Narendra Modi: ಎರಡೇ ದಿನದಲ್ಲಿ ಬಾಲಕಿಗೆ ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ; ಏನಿದು ಪತ್ರ?
2021ರಲ್ಲಿ ದಕ್ಷಿಣ ಮುಂಬೈಯ ಅಂಬಾನಿ ನಿವಾಸದ ಬಳಿ 20 ಜಿಲೆಟಿನ್ ಕಡ್ಡಿಗಳು ಮತ್ತು ಬೆದರಿಕೆ ಪತ್ರವನ್ನು ಹೊಂದಿರುವ ಕಾರು ಪತ್ತೆಯಾಗಿತ್ತು. ಬಳಿಕ ಕಾರಿನ ಮಾಲಕ, ಉದ್ಯಮಿ ಹಿರಾನ್ ಕಳೆದ ವರ್ಷ ಮಾರ್ಚ್ 5ರಂದು ನೆರೆಯ ಥಾಣೆಯ ಕೊಲ್ಲಿಯಲ್ಲಿ ಶವವಾಗಿ ಪತ್ತೆಯಾಗಿದ್ದ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ