Site icon Vistara News

Mukesh Ambani: 4 ದಿನಗಳ ಅಂತರದಲ್ಲಿ ಅಂಬಾನಿಗೆ 3ನೇ ಜೀವ ಬೆದರಿಕೆ; ಅಚ್ಚರಿಯ ಬೇಡಿಕೆ!

mukesh

mukesh

ಮುಂಬೈ: ಉದ್ಯಮಿ, ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರಿಗೆ ಮತ್ತೊಂದು ಜೀವ ಬೆದರಿಕೆ (Death Threat) ಇ-ಮೇಲ್ ಮೂಲಕ ಬಂದಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. ಸೋಮವಾರ ಕಂಪೆನಿಗೆ ಈ ಬೆದರಿಕೆಯ ಮೇಲ್‌ ಬಂದಿದೆ. 4 ದಿನಗಳ ಅಂತರದಲ್ಲಿ ಮುಕೇಶ್‌ ಅಂಬಾನಿ ಅವರಿಗೆ ಬಂದಿರುವ 3ನೇ ಜೀವ ಬೆದರಿಕೆ ಇದಾಗಿದೆ.

ಬೇಡಿಕೆ ಏನು?

400 ಕೋಟಿ ರೂ. ನೀಡಬೇಕು. ಇಲ್ಲದಿದ್ದರೆ ಮುಕೇಶ್‌ ಅಂಬಾನಿ ಜೀವಕ್ಕೆ ಅಪಾಯವಿದೆ ಎಂದು ಇ-ಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ ಪೊಲೀಸರು, ಅಪರಾಧ ವಿಭಾಗ ಮತ್ತು ಸೈಬರ್ ತಂಡಗಳು ಇ-ಮೇಲ್ ಕಳುಹಿಸಿದವರನ್ನು ಪತ್ತೆಹಚ್ಚಲು ತೀವ್ರ ಶೋಧ ಆರಂಭಿಸಿದ್ದಾರೆ.

ಅಕ್ಟೋಬರ್‌ 28ರಂದು 200 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿ ಜೀವ ಬೆದರಿಕೆಯ ಇ-ಮೇಲ್‌ ಬಂದಿತ್ತು. ಇದೀಗ ದ್ವಿಗುಣ ಹಣ ನೀಡುವಂತೆ ಮತ್ತೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ʼನಿಮ್ಮ ಭದ್ರತೆ ಎಷ್ಟೇ ಉತ್ತಮವಾಗಿದ್ದರೂ ನಮ್ಮ ಒಬ್ಬ ಸ್ನೈಪರ್ ನಿಮ್ಮನ್ನು ಕೊಲ್ಲಬಹುದು. ಈ ಬಾರಿ ನಮ್ಮ ಬೇಡಿಕೆ 400 ಕೋಟಿ ರೂ.ಗಳಾಗಿದ್ದು, ಪೊಲೀಸರು ನಮ್ಮನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಸಾಧ್ಯವಿಲ್ಲʼ ಎಂದು ಇ-ಮೇಲ್‌ನಲ್ಲಿ ಬರೆಯಲಾಗಿದೆ. ಅದಕ್ಕೂ ಮೊದಲು ಅಕ್ಟೋಬರ್ 27ರಂದು ಇ-ಮೇಲ್ ಕಳುಹಿಸಿದ್ದ ವ್ಯಕ್ತಿ 20 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಮತ್ತು ದುಡ್ಡು ನೀಡದಿದ್ದರೆ ಭಾರತದ ಅತ್ಯುತ್ತಮ ಶೂಟರ್‌ ಮೂಲಕ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ನಾವು ಭಾರತದ ಅತ್ಯುತ್ತಮ ಶೂಟರ್‌ಗಳನ್ನು ಹೊಂದಿದ್ದೇವೆ ಎಂದೂ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಅಂಬಾನಿ ನಿವಾಸ ʼಆಂಟಿಲಿಯಾʼದಲ್ಲಿನ ಭದ್ರತಾ ಅಧಿಕಾರಿಗಳು ಈ ಕುರಿತು ಗಾಮ್ದೇವಿ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿರುವ ಮಧ್ಯೆಯೇ ಮತ್ತೆ 2 ಎರಡು ಜೀವ ಬೆದರಿಕೆಯ ಇ-ಮೇಲ್‌ ಬಂದಿರುವುದು ಆತಂಕ ಮೂಡಿಸಿದೆ.

ಈ ಹಿಂದೆಯೂ ಬಂದಿತ್ತು

ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಅವರಿಗೆ ಜೀವ ಬೆದರಿಕೆ ಬರುತ್ತಿರುವುದು ಇದು ಮೊದಲ ಸಲವೇನಲ್ಲ. ಹಿಂದೆಯೂ ಅನೇಕ ಬಾರಿ ಈ ರೀತಿಯ ಘಟನೆಗಳು ನಡೆದಿವೆ. ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಿ ಅನಾಮಧೇಯ ಕರೆ ಮಾಡಿದ ಬಿಹಾರ ಮೂಲದ ವ್ಯಕ್ತಿಯನ್ನು ಮುಂಬೈ ಪೊಲೀಸರು ಕಳೆದ ವರ್ಷ ಬಂಧಿಸಿದ್ದರು. ಕರೆ ಮಾಡಿದ ವ್ಯಕ್ತಿ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ದಕ್ಷಿಣ ಮುಂಬೈಯಲ್ಲಿರುವ ಅಂಬಾನಿ ಕುಟುಂಬದ ನಿವಾಸ ‘ಆಂಟಿಲಿಯಾ’ವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ.

ಇದನ್ನೂ ಓದಿ: Health Care: ಉ.ಪ್ರ. ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ಬಿಜೆಪಿ ಮಾಜಿ ಎಂಪಿ ಮಗ ಸಾವು, ತಂದೆಯ ಧರಣಿ

2021ರಲ್ಲಿ ದಕ್ಷಿಣ ಮುಂಬೈಯ ಅಂಬಾನಿ ನಿವಾಸದ ಬಳಿ 20 ಜಿಲೆಟಿನ್ ಕಡ್ಡಿಗಳು ಮತ್ತು ಬೆದರಿಕೆ ಪತ್ರವನ್ನು ಹೊಂದಿರುವ ಕಾರು ಪತ್ತೆಯಾಗಿತ್ತು. ‘ಇದು ಕೇವಲ ಟ್ರೇಲರ್ ಮಾತ್ರ’ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಬಳಿಕ ಕಾರಿನ ಮಾಲಕ, ಉದ್ಯಮಿ ಹಿರಾನ್ ಕಳೆದ ವರ್ಷ ಮಾರ್ಚ್ 5ರಂದು ನೆರೆಯ ಥಾಣೆಯ ಕೊಲ್ಲಿಯಲ್ಲಿ ಶವವಾಗಿ ಪತ್ತೆಯಾಗಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version