ಮುಂಬೈ: ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ತೆಲಂಗಾಣದ 19 ವರ್ಷದ ಯುವಕನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಗಣೇಶ್ ರಮೇಶ್ ವನಪರ್ದಿ ಎಂದು ಗುರುತಿಸಲಾಗಿದ್ದು ಆತನನ್ನು ನವೆಂಬರ್ 8ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮುಖೇಶ್ ಅಂಬಾನಿ ಅವರಿಗೆ ಅಪರಿಚಿತ ವ್ಯಕ್ತಿಯಿಂದ 400 ಕೋಟಿ ರೂ.ಗಳ ಬೆದರಿಕೆ ಇಮೇಲ್ ಬಂದ ಕೆಲವೇ ದಿನಗಳಲ್ಲಿ ಈ ಬಂಧನ ನಡೆದಿದೆ. ಅಂಬಾನಿಯ ಕಂಪನಿಗೆ ಅಕ್ಟೋಬರ್ 30ರಂದು ಜೀವ ಬೆದರಿಕೆಯ ಇಮೇಲ್ ಬಂದಿತ್ತು. ಆ ಮೂಲಕ ನಾಲ್ಕು ದಿನಗಳ ಅಂತರದಲ್ಲಿ ಅಂಬಾನಿ ಅವರಿಗೆ ಮೂರನೇ ಬೆದರಿಕೆ ಇಮೇಲ್ ಬಂದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 27ರಂದು ಅಪರಿಚಿತ ವ್ಯಕ್ತಿಯಿಂದ 20 ಕೋಟಿ ರೂ.ಗಳ ಬೇಡಿಕೆ ಇಟ್ಟು ಮೊದಲ ಇಮೇಲ್ ಬಂದಿತ್ತು. ಈ ಬಗ್ಗೆ ಗಾಮ್ದೇವಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಬಳಿಕ ಅಕ್ಟೋಬರ್ 28ರಂದು 200 ಕೋಟಿ ರೂ.ಗಳ ಬೇಡಿಕೆ ಸಲ್ಲಿಸಿ ಎರಡನೇ ಇಮೇಲ್ ಬಂದಿತ್ತು. ಪುನಃ ಅಕ್ಟೋಬರ್ 30ರಂದು 400 ಕೋಟಿ ರೂ. ಆಗ್ರಹಿಸಿ ಇಮೇಲ್ ಕಳುಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಇದೀಗ ಶಂಕಿತನನ್ನು ವಶಕ್ಕೆ ಪಡೆಯಲಾಗಿದ್ದು ಪೊಲೀಸರು ತನುಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: Mukesh Ambani: 4 ದಿನಗಳ ಅಂತರದಲ್ಲಿ ಅಂಬಾನಿಗೆ 3ನೇ ಜೀವ ಬೆದರಿಕೆ; ಅಚ್ಚರಿಯ ಬೇಡಿಕೆ!
ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಿ ಅನಾಮಧೇಯ ಕರೆ ಮಾಡಿದ ಬಿಹಾರ ಮೂಲದ ವ್ಯಕ್ತಿಯನ್ನು ಮುಂಬೈ ಪೊಲೀಸರು ಕಳೆದ ವರ್ಷ ಬಂಧಿಸಿದ್ದರು. ಅಲ್ಲದೆ 2021ರಲ್ಲಿ ದಕ್ಷಿಣ ಮುಂಬೈಯ ಅಂಬಾನಿ ನಿವಾಸದ ಬಳಿ 20 ಜಿಲೆಟಿನ್ ಕಡ್ಡಿಗಳು ಮತ್ತು ಬೆದರಿಕೆ ಪತ್ರವನ್ನು ಹೊಂದಿರುವ ಕಾರು ಪತ್ತೆಯಾಗಿತ್ತು. ಬಳಿಕ ಕಾರಿನ ಮಾಲಕ, ಉದ್ಯಮಿ ಹಿರಾನ್ ಕಳೆದ ವರ್ಷ ಮಾರ್ಚ್ 5ರಂದು ನೆರೆಯ ಥಾಣೆಯ ಕೊಲ್ಲಿಯಲ್ಲಿ ಶವವಾಗಿ ಪತ್ತೆಯಾಗಿದ್ದ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ