Site icon Vistara News

ಪ್ರಧಾನಿ ಮೋದಿ ಕ್ಯಾಬಿನೇಟ್‌ನ ಇಬ್ಬರು ಸಚಿವರಾದ ಮುಖ್ತಾರ್‌ ಅಬ್ಬಾಸ್‌ ನಖ್ವಿ, ಆರ್‌ಸಿಪಿ ಸಿಂಗ್‌ ರಾಜೀನಾಮೆ

minsters lead

ನವ ದೆಹಲಿ: ಕೇಂದ್ರ ಸಚಿವರಾದ ಮುಖ್ತಾರ್‌ ಅಬ್ಬಾಸ್‌ ನಖ್ವಿ ಮತ್ತು ರಾಮ್‌ ಚಂದ್ರ ಪ್ರಸಾದ್‌ ಸಿಂಗ್‌ (ಆರ್‌ಸಿಪಿ ಸಿಂಗ್‌) ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಿಬ್ಬರ ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಇವರಿಬ್ಬರೂ ರಾಜ್ಯಸಭೆ ಸದಸ್ಯರಾಗಿ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದಿದ್ದರು. ಗುರುವಾರ ಸದಸ್ಯತ್ವ ಅವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಇಂದು ಹುದ್ದೆಯಿಂದ ಕೆಳಗಿಳಿದಿದ್ದಾರೆ. ಹಾಗೇ, ಇಂದಿನ ಸಭೆಯಲ್ಲಿ ಸಚಿವರಿಬ್ಬರ ಕಾರ್ಯವೈಖರಿಯನ್ನು, ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅಪಾರವಾಗಿ ಶ್ಲಾಘಿಸಿದ್ದಾರೆ.

ಮುಖ್ತಾರ್‌ ಅಬ್ಬಾಸ್‌ ನಖ್ವಿ 2019ರಿಂದಲೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವರಾಗಿದ್ದರು. ಹಾಗೇ, ಆರ್‌ಸಿಪಿ ಸಿಂಗ್‌, ಬಿಜೆಪಿಯ ಮೈತ್ರಿ ಪಕ್ಷ ಜೆಡಿಯುದವರಾಗಿದ್ದು 2021ರಲ್ಲಿ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾದ ವೇಳೆ ಇವರನ್ನು ಉಕ್ಕು ಸಚಿವಾಲಯದ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.
ನಖ್ವಿ ಬಿಜೆಪಿಯವರೇ ಆಗಿದ್ದು, ಅವರನ್ನು ಈ ಬಾರಿ ರಾಜ್ಯಸಭೆಗೆ ಮರು ಆಯ್ಕೆ ಮಾಡಿಲ್ಲ. ಇವರ ಹೆಸರು ಉಪರಾಷ್ಟ್ರಪತಿ ಹುದ್ದೆ ರೇಸ್‌ನಲ್ಲಿಯೂ ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಇವರನ್ನು ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿ ಮಾಡಬಹುದು ಅಥವಾ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್‌ ಗವರ್ನರ್‌ ಆಗಿಯೂ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಿದ ಇಬ್ಬರು JDS ಶಾಸಕರ ಉಚ್ಚಾಟನೆ

ಹಾಗೇ, ಆರ್‌ಸಿಪಿ ಸಿಂಗ್‌ ರಾಜ್ಯಸಭೆ ಅವಧಿ ಈ ಸಲ ಮುಗಿಯುತ್ತದೆ ಎಂದು ಗೊತ್ತಿದ್ದರೂ ಅವರನ್ನು ಬಿಹಾರದಿಂದ ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆ ಮಾಡಲು ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ನಿರಾಕರಿಸಿದ್ದರು. ಹೀಗಾಗಿ ಅವರು ಕೇಂದ್ರ ಸಚಿವನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ಬಗ್ಗೆ ಆರ್‌ಸಿಪಿ ಸಿಂಗ್‌ ಕೂಡ ಬೇಸರಿಸಿಕೊಂಡಿದ್ದಾರೆ. ಅವರು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದೂ ವರದಿಯಾಗಿತ್ತು.

ಇಂದು ಕ್ಯಾಬಿನೆಟ್‌ ಸಭೆ ಶುರುವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮೊದಲು ನಖ್ವಿ ಮತ್ತು ಆರ್‌ಸಿಪಿ ಸಿಂಗ್‌ ಬಗ್ಗೆಯೇ ಮಾತನಾಡಲು ಶುರುಮಾಡಿದರು. ಆಗಲೇ ಗೊತ್ತಾಗಿತ್ತು ಇವರಿಬ್ಬರೂ ರಾಜೀನಾಮೆ ನೀಡಬೇಕು ಎಂಬುದು. ಸಭೆ ಮುಗಿದ ತಕ್ಷಣ ಅಬ್ಬಾಸ್‌ ನಖ್ವಿ ಬಿಜೆಪಿ ಪ್ರಧಾನ ಕಚೇರಿಗೆ ಹೋಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿದರು.

ಇದನ್ನೂ ಓದಿ: ನಿತೀಶ್‌ ಜತೆ ಜಗಳ| ರಾಜ್ಯಸಭೆ ಟಿಕೆಟ್‌ ಕೊಡದ ಬೇಸರ, ಕೇಂದ್ರ ಸಚಿವ ಆರ್‌ಸಿಪಿ ಸಿಂಗ್‌ ಸದ್ಯವೇ ಬಿಜೆಪಿಗೆ ಸೇರ್ಪಡೆ?

Exit mobile version