ಲಖನೌ: ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಸೇರಿದ್ದ ಗ್ಯಾಂಗ್‌ಸ್ಟರ್ (Gangster) ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ (Mukhtar Ansari) ಗುರುವಾರ (ಮಾರ್ಚ್ 28) ಹೃದಯಾಘಾತದಿಂದ (Cardiac Arrest) ಮೃತಪಟ್ಟಿದ್ದು, ಶನಿವಾರ (ಮಾರ್ಚ್ 30) ಘಾಜಿಪುರದಲ್ಲಿ ಆತನ ಅಂತ್ಯ ಸಂಸ್ಕಾರ ಮಾಡಲಾಗಿದೆ. ಭಾರಿ ಪ್ರಮಾಣದ ಜನಸಂಖ್ಯೆ, ಘೋಷಣೆ, ಬಿಗಿ ಭದ್ರತೆಯ ಮಧ್ಯೆಯೇ ಮುಖ್ತಾರ್ ಅನ್ಸಾರಿ ಮಣ್ಣಲ್ಲಿ ಮಣ್ಣಾಗಿದ್ದಾನೆ. ಇದರ ಬೆನ್ನಲ್ಲೇ, ಮುಖ್ತಾರ್ ಅನ್ಸಾರಿಯ ಪತ್ನಿ ಆಫ್ಸಾ ಅನ್ಸಾರಿ (Afsa Ansari) ಕೂಡ ಡಾನ್ ಆಗಿದ್ದು, ಈಕೆಯೂ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಹೌದು, ಮುಖ್ತಾರ್ ಅನ್ಸಾರಿ ಪತ್ನಿ ಆಫ್ಸಾ ಅನ್ಸಾರಿ ಕೂಡ ಲೇಡಿ ಡಾನ್ ಆಗಿದ್ದು, 2022ರಿಂದ ತಲೆಮರೆಸಿಕೊಂಡಿದ್ದಾಳೆ. ಈಕೆಯ ವಿರುದ್ಧ ಗ್ಯಾಂಗ್ ಸ್ಟರ್ ಕಾಯ್ದೆ ಸೇರಿ 9 ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ. ಈಕೆಯ ಕುರಿತು ಮಾಹಿತಿ ನೀಡಿದವರಿಗೆ 75 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದಾರೆ. ಛಾವ್ನಿ ಲೈನ್ ಹಾಗೂ ಬಬೆಡ್ಡಿಯಲ್ಲಿ ಅಕ್ರಮವಾಗಿ ಭೂಮಿ ಅತಿಕ್ರಮಣ ಮಾಡಿಕೊಂಡಿರುವುದು ಸೇರಿ ಹಲವು ಪ್ರಕರಣಗಳಲ್ಲಿ ಈಕೆ ಪೊಲೀಸರಿಗೆ ಬೇಕಾಗಿದ್ದಾಳೆ. ಮುಖ್ತಾರ್ ಅನ್ಸಾರಿ ಅಂತ್ಯಕ್ರಿಯೆ ವೇಳೆ ಈಕೆಯು ಗೌಪ್ಯವಾಗಿ ಬಂದು ಅಂತಿಮ ದರ್ಶನ ಪಡೆದಿದ್ದಾಳೆ ಎಂಬ ಮಾತುಗಳು ಕೇಳಿಬಂದಿವೆ.
ಮುಖ್ತಾರ್ ಅನ್ಸಾರಿ ಅಂತ್ಯಕ್ರಿಯೆ ವೇಳೆ ಗಲಾಟೆ
The amount of people who came out to say the last goodbye to Mukhtar Ansari says a lot about how much he was loved by all. #MukhtarAnsari pic.twitter.com/d9St7PTSXB
— Shirin Khan (@ShirinKhan0) March 30, 2024
ಉತ್ತರ ಪ್ರದೇಶದಲ್ಲಿ ರೌಡಿಗಳು, ಅವರ ಪತ್ನಿಯರ ಹಾವಳಿ
ಉತ್ತರ ಪ್ರದೇಶದಲ್ಲಿ ಕಳೆದ ಹಲವು ದಶಕಗಳಿಂದ ಸಮಾಜವಾದಿ ಹಾಗೂ ಬಹುಜನ ಸಮಾಜ ಪಕ್ಷದ ಶಾಸಕರು, ಸಂಸದರು ಗೂಂಡಾಗಿರಿಯ ಹಿನ್ನೆಲೆಯಲ್ಲಿ ಹೊಂದಿರುವುದು ಸಾಮಾನ್ಯವಾಗಿದೆ. ವಿಕಾಸ್ ದುಬೆ, ವೀರೇಂದ್ರ ಪ್ರತಾಪ್ ಶಾಹಿ, ಆತಿಕ್ ಅಹ್ಮದ್, ಮುಖ್ತಾರ್ ಅನ್ಸಾರಿ, ಅರುಣಾ ಶಂಕರ್ ಶುಕ್ಲಾ ಸೇರಿ ಹತ್ತಾರು ಗ್ಯಾಂಗ್‌ಸ್ಟರ್‌ಗಳು ರಾಜಕಾರಣಿಗಳಾಗಿ ಬದಲಾಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಪೊಲೀಸ್ ಕಸ್ಡಡಿಯ ವೇಳೆಯೇ ದುಷ್ಕರ್ಮಿಗಳ ಗುಂಡಿಗೆ ಹತನಾದ ಅತೀಕ್ ಅಹ್ಮದ್ ಪತ್ನಿ ಶೈಷ್ಟ ಪರ್ವೀನ್ ಕೂಡ ರೌಡಿಯಾಗಿದ್ದು, ಈಕೆಯ ಕುರಿತು ಮಾಹಿತಿ ನೀಡಿದರೆ 50 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿದೆ.
ಅನ್ಸಾರಿ ಅಜ್ಜ ಸ್ವಾತಂತ್ರ್ಯ ಹೋರಾಟಗಾರ
ಉತ್ತರ ಪ್ರದೇಶ ಕಂಡ ದೊಡ್ಡ ಗ್ಯಾಂಗ್‌ಸ್ಟರ್‌ಗಳಲ್ಲಿ ಒಬ್ಬನಾದ ಮುಖ್ತಾರ್ ಅನ್ಸಾರಿಯ ಅಜ್ಜ ಸ್ವಾತಂತ್ರ್ಯ ಹೋರಾಟಗಾರ ಎಂಬುದು ಗಮನಾರ್ಹ ಸಂಗತಿಯಾಗಿದೆ. ಉತ್ತರ ಪ್ರದೇಶದ ಯೂಸುಫ್‌ಪುರದಲ್ಲಿ 1960ರಲ್ಲಿ ಜನಿಸಿದ ಮುಖ್ತಾರ್ ಅನ್ಸಾರಿಯ ಅಜ್ಜ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರ ಅಜ್ಜ ಮುಖ್ತಾರ್ ಅಹ್ಮದ್ ಅನ್ಸಾರಿ ಅವರು ದೇಶದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಾಯಕರಾಗಿದ್ದ ಇವರು 1927ರವರೆಗೆ ಅದರ ಅಧ್ಯಕ್ಷರೂ ಆಗಿದ್ದರು. ಮುಸ್ಲಿಂ ಲೀಗ್ ಜತೆ ಗುರುತಿಸಿಕೊಂಡಿದ್ದ ಮುಖ್ತಾರ್ ಅಹ್ಮದ್ ಅನ್ಸಾರಿ ಅವರು ಪ್ರತ್ಯೇಕವಾದದ ಅಜೆಂಡಾ ಅರಿತು ಅಂತರ ಕಾಯ್ದುಕೊಂಡಿದ್ದರು. ಅಲ್ಲದೆ, ಇವರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಚಾನ್ಸಲರ್ ಕೂಡ ಆಗಿದ್ದರು.
ಮುಖ್ತಾರ್ ಅನ್ಸಾರಿಯ ತಾಯಿಯ ತಂದೆ (ಅಜ್ಜ) ಮೊಹಮ್ಮದ್ ಉಸ್ಮಾನ್ ಅವರು ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗಿದ್ದರು. ಇವರು ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಇವರಿಗೆ ಮರಣೋತ್ತರವಾಗಿ ಪರಮವೀರ ಚಕ್ರ ಪ್ರಶಸ್ತಿ ಘೋಷಿಸಲಾಗಿದೆ. ಇಂತಹ ಕುಟುಂಬದಲ್ಲಿ ಜನಿಸಿದ ಮುಖ್ತಾರ್ ಅನ್ಸಾರಿ, 1980ರ ದಶಕದಲ್ಲಿ ಗ್ಯಾಂಗ್‌ಸ್ಟರ್ ಆಗಿ ಬದಲಾದ. ಈತ ಸರ್ಕಾರದ ಗುತ್ತಿಗೆ ಪಡೆಯುವ ಭರದಲ್ಲಿ ಗೂಂಡಾಗಿರಿ ಆರಂಭಿಸಿದ. ಕೊಲೆ, ದರೋಡೆ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹದಿಂದ ಉತ್ತರ ಪ್ರದೇಶದಾದ್ಯಂತ ಸುದ್ದಿಯಾದ. ಹಣ, ದರ್ಪದ ಮದವೇರಿದ್ದ ಈತ ರಾಜಕೀಯವನ್ನೂ ಸೇರಿದ.
ಇದನ್ನೂ ಓದಿ: Mukhtar Ansari : ನಿಜಕ್ಕೂ ಗ್ಯಾಂಗ್ ಸ್ಟರ್ ಅನ್ಸಾರಿ ಸತ್ತಿದ್ದು ಹೇಗೆ? ಬಂತು ಪೋಸ್ಟ್ ಮಾರ್ಟಮ್ ರಿಪೋರ್ಟ್!
ಮೌ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದ ಮುಖ್ತಾರ್ ಅನ್ಸಾರಿ 2005ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್ ಜೈಲಿನಲ್ಲಿದ್ದ. ಆತನ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಸೆಪ್ಟೆಂಬರ್ 2022 ರಿಂದ ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳು ಎಂಟು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದ್ದು, ಅವರನ್ನು ಬಾಂಡಾ ಜೈಲಿನಲ್ಲಿರಿಸಲಾಗಿತ್ತು. ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ 66 ದರೋಡೆಕೋರರ ಪಟ್ಟಿಯಲ್ಲಿ ಅನ್ಸಾರಿ ಹೆಸರು ಇತ್ತು. ಮುಖ್ತಾರ್ ಅನ್ಸಾರಿಯನ್ನು ನಕಲಿ ಎನ್ಕೌಂಟರ್ ಮೂಲಕ ಕೊಲ್ಲಬಹುದು ಎಂದು ಅವರ ಕುಟುಂಬ ಸದಸ್ಯರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ