Site icon Vistara News

ಮುಖ್ತಾರ್‌ ಅನ್ಸಾರಿ ನಿಧನ; ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗ ಗ್ಯಾಂಗ್‌ಸ್ಟರ್‌ ಆಗಿದ್ದು ಹೇಗೆ?

gangster mukhtar ansari

Mukhtar Ansari dies: How a freedom fighter's grandson became a criminal

ನವದೆಹಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಸೇರಿದ್ದ ಗ್ಯಾಂಗ್​ಸ್ಟರ್​ (Gangster) ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ (Mukhtar Ansari) ಗುರುವಾರ (ಮಾರ್ಚ್‌ 28) ಹೃದಯಾಘಾತದಿಂದ (Cardiac Arrest) ನಿಧನ ಹೊಂದಿದ್ದಾನೆ. ಉತ್ತರ ಪ್ರದೇಶದ ಬಾಂಡಾ ಜೈಲಿನಲ್ಲಿದ್ದ ಅನ್ಸಾರಿಗೆ ಹೃದಯಾಘಾತವಾಗಿ ಬ್ಯಾರಕ್‌ನಲ್ಲಿ ಬಿದ್ದಿದ್ದ ಎಂದು ಮೂಲಗಳು ತಿಳಿಸಿವೆ. ಆತನನ್ನು ಅಲ್ಲಿಂದ ಬಾಂಡಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇನ್ನು, ಮುಖ್ತಾರಿ ಅನ್ಸಾರಿಯ ಕುಟುಂಬವು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಹೊಂದಿದ್ದು, ಇಂತಹ ಹಿನ್ನೆಲೆಯುಳ್ಳವನು ಗ್ಯಾಂಗ್‌ಸ್ಟರ್‌ ಹೇಗಾದ ಎಂಬುದೇ ರೋಚಕವಾಗಿದೆ.

ಅನ್ಸಾರಿ ಅಜ್ಜ ಸ್ವಾತಂತ್ರ್ಯ ಹೋರಾಟಗಾರ

ಉತ್ತರ ಪ್ರದೇಶದ ಯೂಸುಫ್‌ಪುರದಲ್ಲಿ 1960ರಲ್ಲಿ ಜನಿಸಿದ ಮುಖ್ತಾರ್‌ ಅನ್ಸಾರಿಯ ಅಜ್ಜ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರ ಅಜ್ಜ ಮುಖ್ತಾರ್‌ ಅಹ್ಮದ್‌ ಅನ್ಸಾರಿ ಅವರು ದೇಶದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ನಾಯಕರಾಗಿದ್ದ ಇವರು 1927ರವರೆಗೆ ಅದರ ಅಧ್ಯಕ್ಷರೂ ಆಗಿದ್ದರು. ಮುಸ್ಲಿಂ ಲೀಗ್‌ ಜತೆ ಗುರುತಿಸಿಕೊಂಡಿದ್ದ ಮುಖ್ತಾರ್‌ ಅಹ್ಮದ್‌ ಅನ್ಸಾರಿ ಅವರು ಪ್ರತ್ಯೇಕವಾದದ ಅಜೆಂಡಾ ಅರಿತು ಅಂತರ ಕಾಯ್ದುಕೊಂಡಿದ್ದರು. ಅಲ್ಲದೆ, ಇವರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಚಾನ್ಸಲರ್‌ ಕೂಡ ಆಗಿದ್ದರು.

ಮುಖ್ತಾರ್‌ ಅನ್ಸಾರಿಯ ತಾಯಿಯ ತಂದೆ (ಅಜ್ಜ) ಮೊಹಮ್ಮದ್‌ ಉಸ್ಮಾನ್‌ ಅವರು ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್‌ ಆಗಿದ್ದರು. ಇವರು ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಇವರಿಗೆ ಮರಣೋತ್ತರವಾಗಿ ಪರಮವೀರ ಚಕ್ರ ಪ್ರಶಸ್ತಿ ಘೋಷಿಸಲಾಗಿದೆ.

ಇಂತಹ ಕುಟುಂಬದಲ್ಲಿ ಜನಿಸಿದ ಮುಖ್ತಾರ್‌ ಅನ್ಸಾರಿ, 1980ರ ದಶಕದಲ್ಲಿ ಗ್ಯಾಂಗ್‌ಸ್ಟರ್‌ ಆಗಿ ಬದಲಾದ. ಈತ ಸರ್ಕಾರದ ಗುತ್ತಿಗೆ ಪಡೆಯುವ ಭರದಲ್ಲಿ ಗೂಂಡಾಗಿರಿ ಆರಂಭಿಸಿದ. ಕೊಲೆ, ದರೋಡೆ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹದಿಂದ ಉತ್ತರ ಪ್ರದೇಶದಾದ್ಯಂತ ಸುದ್ದಿಯಾದ. ಹಣ, ದರ್ಪದ ಮದವೇರಿದ್ದ ಈತ ರಾಜಕೀಯವನ್ನೂ ಸೇರಿದ.

ಇದನ್ನೂ ಓದಿ: Mukhtar Ansari : ಗ್ಯಾಂಗ್​ಸ್ಟರ್​ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ

ಮೌ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದ ಮುಖ್ತಾರ್ ಅನ್ಸಾರಿ 2005ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್ ಜೈಲಿನಲ್ಲಿದ್ದ. ಆತನ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಸೆಪ್ಟೆಂಬರ್ 2022 ರಿಂದ ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳು ಎಂಟು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದ್ದು, ಅವರನ್ನು ಬಾಂಡಾ ಜೈಲಿನಲ್ಲಿರಿಸಲಾಗಿತ್ತು. ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ 66 ದರೋಡೆಕೋರರ ಪಟ್ಟಿಯಲ್ಲಿ ಅನ್ಸಾರಿ ಹೆಸರು ಇತ್ತು. ಮುಖ್ತಾರ್ ಅನ್ಸಾರಿಯನ್ನು ನಕಲಿ ಎನ್​ಕೌಂಟರ್ ಮೂಲಕ ಕೊಲ್ಲಬಹುದು ಎಂದು ಅವರ ಕುಟುಂಬ ಸದಸ್ಯರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version