ಲಕ್ನೋ: ಬಾಂಡಾ ಆಸ್ಪತ್ರೆಯಲ್ಲಿ ಗುರುವಾರ (ಮಾರ್ಚ್ 28) ನಿಧನ ಹೊಂದಿದ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ (Mukhtar Ansari)ಗೆ ಬೆಂಬಲಿಸಿ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿದ್ದ ಬಕ್ಷಿ-ಕಾ-ತಲಾಬ್ (Bakshi-ka-Talab) ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಉತ್ತರ ಜಿಲ್ಲೆಯ ಡಿಸಿಪಿ ಅಭಿಜಿತ್ ಶಂಕರ್ (DCP Abhijeet Shanker) ಈ ಬಗ್ಗೆ ಮಾತನಾಡಿ, “ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾನ್ಸ್‌ಟೇಬಲ್ ಫಯಾಜ್ ಖಾನ್ ಅವರನ್ನು ಅಮಾನತುಗೊಳಿಸಲು ಅನುಮತಿ ನೀಡುವಂತೆ ಕೋರಿ ಪೊಲೀಸ್ ಇಲಾಖೆ ಚುನಾವಣಾ ಆಯೋಗದೊಂದಿಗೆ ಮಾತುಕತೆ ನಡೆಸಲು ಪ್ರಾರಂಭಿಸಿದೆ” ಎಂದು ತಿಳಿಸಿದ್ದಾರೆ. “ಫಯಾಜ್ ಖಾನ್ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಅಸಮಂಜಸವಾದ ನಡವಳಿಕೆಯನ್ನು ಪ್ರದರ್ಶಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
थाना बीकेटी में तैनात आरक्षी फयाज खान द्वारा अपने निजी व्हाट्सएप पर मुख्तार अंसारी के समर्थन में स्टेटस लगाने के संबंध में श्रीमान पुलिस उपायुक्त उत्तरी महोदय द्वारा दी गई बाईट।#UPPolice #Lkopolice_On_Duty pic.twitter.com/fLRJniAtnj
— LUCKNOW POLICE (@lkopolice) March 31, 2024
“ಚುನಾವಣಾ ಆಯೋಗದಿಂದ ಅನುಮೋದನೆ ಸಿಕ್ಕ ನಂತರ ನಾವು ಫಯಾಜ್ ಖಾನ್ ಅವರನ್ನು ಅಮಾನತುಗೊಳಿಸಲಿದ್ದೇವೆ ಮತ್ತು ಅಗತ್ಯ ಕಾನೂನು ಕ್ರಮಗಳನ್ನು ಅನುಸರಿಸುತ್ತೇವೆ” ಎಂದು ಶಂಕರ್ ವಿವರಿಸಿದ್ದಾರೆ. “ಬಿಕೆಟಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅವರು ಫಯಾಜ್ ಖಾನ್ ಅವರ ವಾಟ್ಸ್‌ಆ್ಯಪ್ ಸ್ಟೇಟಸ್ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ನಾವು ಹೆಚ್ಚಿನ ತನಿಖೆ ನಡೆಸಿದ್ದೇವೆʼʼ ಎಂದು ಅಭಿಜಿತ್ ಶಂಕರ್ ಹೇಳಿದ್ದಾರೆ.
ಏನಿದು ಪ್ರಕರಣ?
ವರದಿಗಳ ಪ್ರಕಾರ, ಕಾನ್ಸ್‌ಟೇಬಲ್ ಫಯಾಜ್ ಖಾನ್ ಅವರು ಮುಖ್ತಾರ್ ಅನ್ಸಾರಿಗೆ ಬೆಂಬಲ ಸೂಚಿಸಿ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿದ್ದರು ಎಂಬ ಆರೋಪವಿದೆ. ಅಲ್ಲದೆ ಅನ್ಸಾರಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಖಾನ್ ಅವರ ಕೆಲವು ಸಹೋದ್ಯೋಗಿಗಳು ಅವರ ವಾಟ್ಸ್‌ಆ್ಯಪ್ ಸ್ಟೇಟಸ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “ಸಿಂಹದ ಘರ್ಜನೆಯನ್ನು ಕೇಳಿದಾಗ ಪ್ಯಾಂಟ್ ಒದ್ದೆಯಾಗುವ ಜನರ ಪೋಷಕರು ಈಗ ಬಾಬಾನನ್ನು ಹೊಗಳುತ್ತಿದ್ದಾರೆʼʼ ಎಂದು ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದರು. ಮುಂದುವರೆದು “ಅವರು (ಮುಖ್ತಾರ್ ಅನ್ಸಾರಿ) ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಅವರ ಸಾವಿನ ಬಗ್ಗೆ ದುಃಖಿಸಬೇಡಿ. ಅವನೊಂದಿಗೆ ಮುಖಾಮುಖಿಯಾಗಿ ಹೋರಾಡುವ ಶಕ್ತಿ ಯಾರಿಗೂ ಇರಲಿಲ್ಲ. ಅವರು ಸಿಂಹವನ್ನು ಪಂಜರದಲ್ಲಿ ಇರಿಸಿದ ನಂತರ ಮೋಸದಿಂದ ಕೊಂದರು. ವಿದಾಯ, ಪೂರ್ವಾಂಚಲದ ಸಿಂಹ” ಎಂದು ಖಾನ್ ಉಲ್ಲೇಖಿಸಿದ್ದರು. ಈ ಸ್ಕ್ರೀನ್ ಶಾಟ್ ವೈರಲ್ ಆಗಿತ್ತು.
ಇದನ್ನೂ ಓದಿ: Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್ ರಾಜಕಾರಣಿ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ, ಇನ್ನೂ 20 ಕೇಸ್ ಬಾಕಿ!
ಉತ್ತರ ಪ್ರದೇಶದ ಮೌ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದ ಮುಖ್ತಾರ್ ಅನ್ಸಾರಿ 2005ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಜೈಲಿನಲ್ಲಿದ್ದ. ಆತನ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 2022ರ ಸೆಪ್ಟೆಂಬರ್ನಿಂದ ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳು ಎಂಟು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿತ್ತು. ಹೀಗಾಗಿ ಆತನನ್ನು ಬಾಂಡಾ ಜೈಲಿನಲ್ಲಿ ಇರಿಸಲಾಗಿತ್ತು. ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ 66 ದರೋಡೆಕೋರರ ಪಟ್ಟಿಯಲ್ಲಿ ಅನ್ಸಾರಿ ಹೆಸರು ಇತ್ತು. ಮುಖ್ತಾರ್ ಅನ್ಸಾರಿಯನ್ನು ನಕಲಿ ಎನ್ಕೌಂಟರ್ ಮೂಲಕ ಕೊಲ್ಲಬಹುದು ಎಂದು ಅವರ ಕುಟುಂಬ ಸದಸ್ಯರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು. ಬಾಂಡಾ ಜೈಲಿನಲ್ಲಿದ್ದ ಅನ್ಸಾರಿಗೆ ಹೃದಯಾಘಾತವಾಗಿತ್ತು. ಆತನನ್ನು ಅಲ್ಲಿಂದ ಬಾಂಡಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ