ಪಟನಾ: ಉತ್ತರ ಪ್ರದೇಶ ರಾಜಕಾರಣಿ, ಮಾಜಿ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿಯ (Mukhtar Ansari Case) ಶಾರ್ಪ್‌ಶೂಟರ್ ಅಂಗದ್ ರೈನನ್ನು ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಪೊಲೀಸರ ವಾಂಟೆಡ್ ಲಿಸ್ಟ್‌ನಲ್ಲಿದ್ದ ಈತ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಅಂಗದ್ ರೈ ಪೊಲೀಸರಿಗೆ ಎರಡು ಬಿಯರ್ ಬಾಟಲಿ ತೋರಿಸಿ ಶರಣಾಗಿದ್ದಾನೆ. ಆತನ ಬಳಿಯಿಂದ, ಎರಡು ಬಿಯರ್ ಹಾಗೂ ಎರಡು ವಿಸ್ಕಿ ಬಾಟಲ್ ಪತ್ತೆಯಾಗಿವೆ.
ಬಿಹಾರ ಮದ್ಯ ನಿಷೇಧ ಹಾಗೂ ಅಬಕಾರಿ ಕಾಯ್ದೆ ಅಡಿಯಲ್ಲಿ ಶಾರ್ಪ್‌ಶೂಟರ್‌ನನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ವಹಿಸಿದೆ. ಉತ್ತರ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ತಾನು ಮತಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಆತ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಬಾಟಲಿ ತೋರಿಸಿ ಸಿಕ್ಕಿದ್ದು ಏಕೆ?
ಬಿಹಾರದಲ್ಲಿ ಸಾರಾಯಿ ನಿಷೇಧ ಮಾಡಲಾಗಿದೆ. ಇಲ್ಲಿ ಯಾರಾದರೂ ಮದ್ಯದ ಸಾಗಣೆ ಮಾಡಿದರೆ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಅದರಂತೆ, ಅಂಗದ್ ರೈ, ಎರಡು ಬಿಯರ್ ಬಾಟಲಿ ಹಾಗೂ ವಿಸ್ಕಿ ಬಾಟಲಿ ಹಿಡಿದುಕೊಂಡು ಪೊಲೀಸರ ಬಳಿ ಬಂದಿದ್ದಾನೆ. ಆಗ ಪೊಲೀಸರು ಅಂಗದ್ ರೈನನ್ನು ಬಂಧಿಸಿದ್ದಾರೆ.
“ವ್ಯಕ್ತಿಯೊಬ್ಬ ಬಿಯರ್ ಬಾಟಲಿ ಹಿಡಿದು ಶರಣಾಗಿದ್ದಾನೆ ಎಂಬ ಕುರಿತು ಮಾಹಿತಿ ಲಭ್ಯವಾಯಿತು. ಇದಾದ ಬಳಿಕ ವಿಚಾರಣೆ ನಡೆಸಿದಾಗ ಆತ ಗ್ಯಾಂಗ್‌ಸ್ಟರ್ ಕಮ್ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಶಾರ್ಪ್‌ಶೂಟರ್ ಎಂಬುದು ಗೊತ್ತಾಗಿದೆ. ಉತ್ತರ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ತಾನು ಹತ್ಯೆಗೀಡಾಗಿಲ್ಲ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಶರಣಾಗಿದ್ದಾನೆ” ಎಂದು ದುರ್ಗಾವತಿ ಎಸ್‌ಎಚ್‌ಒ ರಾಜೀವ್ ರಂಜನ್ ಸಿಂಗ್ ಮಾಹಿತಿ ನೀಡಿದ್ದಾರೆ.
ಗ್ಯಾಂಗ್‌ವಾರ್, ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣ ಸೇರಿ ಹಲವು ಕೇಸ್‌ಗಳಲ್ಲಿ ಐದು ಬಾರಿ ಶಾಸಕರಾಗಿದ್ದ ಮುಖ್ತಾರ್ ಅನ್ಸಾರಿಯು ಸದ್ಯ ಉತ್ತರ ಪ್ರದೇಶದ ಬಾಂದಾ ಜೈಲಿನಲ್ಲಿದ್ದಾರೆ. ಅಂಗದ್ ರೈ ಇವರ ಶಾರ್ಪ್‌ಶೂಟರ್ ಆಗಿದ್ದ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ, ಮುಖ್ತಾರ್ ಅನ್ಸಾರಿ ಸಂಬಂಧಿಕರ ಮನೆಗಳನ್ನು ತೆರವುಗೊಳಿಸಲಾಗಿತ್ತು.
ಇದನ್ನೂ ಓದಿ: ಪಾತಕಿ ಮುಖ್ತಾರ್ ಅನ್ಸಾರಿ ಮಕ್ಕಳಿಗೆ ಸೇರಿದ ಮನೆ ನೆಲಸಮಗೊಳಿಸಿದ ಉತ್ತರ ಪ್ರದೇಶ ಪೊಲೀಸರು