ಮುಂಬೈ: ವ್ಹೀಲ್‌ಚೇರ್ (wheelchair) ದೊರೆಯದೆ 80 ವರ್ಷದ ವೃದ್ಧರೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mumbai Airport) ನಡೆದಿದೆ. ಸೋಮವಾರ (ಫೆಬ್ರವರಿ 12) ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಹಿರಿಯರು ನ್ಯೂಯಾರ್ಕ್‌ನಿಂದ ಮುಂಬೈಗೆ ಏರ್ ಇಂಡಿಯಾ(Air India) ವಿಮಾನದಲ್ಲಿ ಆಗಮಿಸಿದ್ದರು. ಈ ವೇಳೆ ಮುಂಬೈ ವಿಮಾನ ನಿಲ್ದಾಣದ ಇಮಿಗ್ರೇಷನ್ ಕೌಂಟರ್‌ನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ಘಟನೆಯ ವಿವರ
ಭಾರತೀಯ ಮೂಲದ ಅವರು ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದಾರೆ. ಪತ್ನಿಯೊಂದಿಗೆ ಭಾರತಕ್ಕೆ ಆಗಮಿಸಿದ್ದ ಅವರು ಮೊದಲೇ ಎರಡು ವ್ಹೀಲ್‌ಚೇರ್ ಕಾದಿರಿಸಿದ್ದರು. ಆದರೆ ವ್ಹೀಲ್‌ಚೇರ್ ಕೊರತೆ ಕಾರಣದಿಂದ ಎರಡರ ಬದಲು ಒಂದನ್ನಷ್ಟೇ ಒದಗಿಸಲಾಗಿತ್ತು. ಪತ್ನಿಯನ್ನು ವ್ಹೀಲ್‌ಚೇರ್‌ನಲ್ಲಿ ಕೂರಿಸಿ ಅವರು ನಡೆದುಕೊಂಡೇ ಹಿಂಬಾಲಿಸಿದ್ದರು.
ʼʼಅವರು ಸುಮಾರು 1.5 ಕಿ.ಮೀ. ನಡೆದು ಇಮಿಗ್ರೇಷನ್ ಕೌಂಟರ್ ಬಳಿಗೆ ತಲುಪಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಅವರು ಹಠಾತ್ತನೆ ಕುಸಿದು ಬಿದ್ದರು. ಕೂಡಲೇ ಅವರಿಗೆ ಔಷಧೋಪಚಾರ ಒದಗಿಸಲಾಯಿತು. ಬಳಿಕ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಯಿತುʼʼ ಎಂದು ಮೂಲಗಳು ತಿಳಿಸಿವೆ. ಈ ವೃದ್ಧ ದಂಪತಿ ನ್ಯೂಯಾರ್ಕ್‌ನಿಂದ ಏರ್ ಇಂಡಿಯಾ AI-116 ವಿಮಾನದಲ್ಲಿ ಮುಂಬೈಗೆ ಆಗಮಿಸಿದ್ದರು. ಸೋಮವಾರ ಬೆಳಗ್ಗೆ 11.30 ಗಂಟೆಗೆ ತಲುಪಬೇಕಿದ್ದ ವಿಮಾನ ಸುಮಾರು ಎರಡೂವರೆ ತಾಸು ವಿಳಂಬವಾಗಿ ಅಪರಾಹ್ನ 2.10ಕ್ಕೆ ಲ್ಯಾಂಡ್ ಆಗಿತ್ತು.
ಈ ವಿಮಾನದಲ್ಲಿನ ಸುಮಾರು 32 ಪ್ರಯಾಣಿಕರು ವ್ಹೀಲ್‌ಚೇರ್‌ಗಾಗಿ ಬೇಡಿಕೆ ಸಲ್ಲಿಸಿದ್ದರು. ಆದರೆ 15 ವ್ಹೀಲ್‌ಚೇರ್ ಮಾತ್ರವೇ ಲಭ್ಯವಿತ್ತು. ಹೀಗಾಗಿ ಅವರಿಗೆ ಸಹಾಯ ಮಾಡಲು ಸಿಬ್ಬಂದಿ ಮುಂದಾಗಿದ್ದರು. ʼʼವ್ಹೀಲ್‌ಚೇರ್ ಒದಗಿಸುವವರೆಗೆ ಕಾಯುವಂತೆ ವಿನಂತಿಸಲಾಯಿತು. ಆದರೆ ಅವರು ತಮ್ಮ ಸಂಗಾತಿಯೊಂದಿಗೆ ನಡೆಯಲು ನಿರ್ಧರಿಸಿದರುʼʼ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಆಘಾತ ವ್ಯಕ್ತಪಡಿಸಿದ ಏರ್ ಇಂಡಿಯಾ
ಈ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಿದ ಏರ್ ಇಂಡಿಯಾ ವಕ್ತಾರರು ಇದನ್ನು ʼದುರದೃಷ್ಟಕರ ಘಟನೆʼ ಎಂದು ಕರೆದಿದ್ದಾರೆ. ʼʼಅನಾರೋಗ್ಯಕ್ಕೆ ಒಳಗಾದ ನಂತರ ಅವರಿಗೆ ಚಿಕಿತ್ಸೆ ನೀಡುತ್ತಿರುವ ವಿಮಾನ ನಿಲ್ದಾಣದ ವೈದ್ಯರ ಸಲಹೆಯಂತೆ, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ನಿಧನರಾದರು” ಎಂದು ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಯು ಮೃತರ ಕುಟುಂಬ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ವಿಮಾನದ ಎಮರ್ಜನ್ಸಿ ಎಕ್ಸಿಟ್ ಬಾಗಿಲು ತೆಗೆದು, ರೆಕ್ಕೆ ಮೇಲೆ ಓಡಾಡಿದ ವ್ಯಕ್ತಿ; ಮುಂದೇನಾಯ್ತು?
“ಟಿಕೆಟ್ ಕಾಯ್ದಿರಿಸುವಿಕೆಯ ಸಮಯದಲ್ಲಿ ಅಗತ್ಯವಿರುವ ಪ್ರತಿಯೊಬ್ಬ ಪ್ರಯಾಣಿಕರಿಗೆ ಗಾಲಿಕುರ್ಚಿ ಸಹಾಯವನ್ನು ಒದಗಿಸಲು ನೀತಿ ರೂಪಿಸಲಾಗಿದ್ದು, ಕಡ್ಡಾಯವಾಗಿ ಅನುಸರಿಸಲಾಗುತ್ತಿದೆʼʼ ಎಂದು ಏರ್ ಇಂಡಿಯಾ ತಿಳಿಸಿದೆ. ವಯಸ್ಸಾದ ಮತ್ತು ದುರ್ಬಲ ಪ್ರಯಾಣಿಕರು ಹಾಗೂ ಅನಾರೋಗ್ಯ ಪೀಡಿತರಿಗೆ ಒದಗಿಸಲಾಗುವ ಗಾಲಿಕುರ್ಚಿಗೆ ಶುಲ್ಕ ವಿಧಿಸಲಾಗುತ್ತದೆ. ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಗಾಲಿಕುರ್ಚಿಯನ್ನು ಉಲ್ಲೇಖಿಸಬೇಕಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ