ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮುಕೇಶ್ ಅಂಬಾನಿ ಅವರಂತಹ ಉದ್ಯಮಿಗಳು, ಶ್ರೀಮಂತರಿಗೆ ಜೀವ ಬೆದರಿಕೆ ಕರೆಗಳು ಸಾಮಾನ್ಯ. ಆದರೀಗ, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೇ (Mumbai Airport) ಬಾಂಬ್ ಬೆದರಿಕೆ ಬಂದಿದೆ. ಹೌದು, ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ (CSMIA) ನಿಲ್ದಾಣದ ಟರ್ಮಿನಲ್ 2ಅನ್ನು ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಇ-ಮೇಲ್ ಮೂಲಕ ಮೂಲಕ ಬೆದರಿಕೆಯೊಡ್ಡಿದ್ದಾನೆ.
ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ (MIAL) ಫೀಡ್‌ಬ್ಯಾಕ್ ಇನ್‌ಬಾಕ್ಸ್‌ಗೆ quaidacasrol@gmail.com ಎಂಬ ಮೇಲ್ ಐಡಿಯಿಂದ ಗುರುವಾರ (ನವೆಂಬರ್ 11) ಬೆಳಗ್ಗೆ 11.06ಕ್ಕೆ ಬೆದರಿಕೆ ಒಡ್ಡಲಾಗಿದೆ. ನನ್ನ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂಬೈ ವಿಮಾನ ನಿಲ್ದಾಣವನ್ನು ಸ್ಫೋಟಿಸುತ್ತೇನೆ ಎಂಬುದಾಗಿ ಮೇಲ್‌ನಲ್ಲಿ ಉಲ್ಲೇಖಿಸಿದ್ದಾನೆ. ಸಹಾರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ಅಪರಿಚಿತ ವ್ಯಕ್ತಿ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಏನೆಂದು ಬೆದರಿಕೆ? ಏನು ಬೇಡಿಕೆ?
“ಸಬ್ಜೆಕ್ಟ್: ಬ್ಲಾಸ್ಟ್. ಬಾಡಿ: ಇದು ನಿಮ್ಮ ವಿಮಾನ ನಿಲ್ದಾಣಕ್ಕೆ ಕೊನೆಯ ಎಚ್ಚರಿಕೆ. ನಮಗೆ 48 ಗಂಟೆಯಲ್ಲಿ 10 ಲಕ್ಷ ಡಾಲರ್‌ಗಳನ್ನು ಬಿಟ್‌ಕಾಯಿನ್‌ನಲ್ಲಿ ನೀಡಬೇಕು. ಇದೇ ವಿಳಾಸಕ್ಕೆ ಅಷ್ಟೂ ಹಣವನ್ನು ನೀಡಬೇಕು. ಮುಂದಿನ 24 ಗಂಟೆಯಲ್ಲಿ ಮತ್ತೊಂದು ಅಲರ್ಟ್ ನೀಡುತ್ತೇವೆ. ಇಲ್ಲದಿದ್ದರೆ ಎರಡನೇ ಟರ್ಮಿನಲ್‌ಅನ್ನು ಬ್ಲಾಸ್ಟ್ ಮಾಡುತ್ತೇವೆ” ಎಂಬುದಾಗಿ ಬೆದರಿಕೆಯ ಇ-ಮೇಲ್‌ನಲ್ಲಿ ಎಚ್ಚರಿಸಲಾಗಿದೆ. ಬಾಂಬ್ ಸ್ಫೋಟದ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ: Death Threat: ಮೋದಿ, ಯೋಗಿಗೆ ಜೀವ ಬೆದರಿಕೆ; ಕರೆ ಮಾಡಿದ ಕಮ್ರಾನ್ ಖಾನ್ ಯಾರು?
ಮೋದಿ, ಯೋಗಿಗೆ ಬೆದರಿಕೆ, ಒಬ್ಬನ ಬಂಧನ
ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿಯು, ಮೋದಿ ಹಾಗೂ ಯೋಗಿ ಅವರ ಹತ್ಯೆ ಜತೆಗೆ ಮುಂಬೈನಲ್ಲಿರುವ ಜೆ. ಜೆ. ಆಸ್ಪತ್ರೆಯನ್ನು ಬಾಂಬಿಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಕಮ್ರಾನ್ ಖಾನ್ ಎಂಬುದಾಗಿ ಗುರುತಿಸಲಾಗಿದೆ. ಈತನನ್ನು ಮುಂಬೈನ ಸಿಯೋನ್ ಪ್ರದೇಶದಲ್ಲಿ ಬಂಧಿಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ