ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ಹೋಳಿ ಆಡಿದ ದಂಪತಿಯು ಸ್ನಾನ ಮಾಡಲು ಬಾತ್‌ರೂಮ್‌ಗೆ ಹೋಗಿದ್ದು, ಅಲ್ಲಿಯೇ (Holi Tragedy) ಮೃತಪಟ್ಟಿದ್ದಾರೆ. ಬಾತ್‌ರೂಮ್‌ನಲ್ಲಿದ್ದ ಗೀಸರ್‌ನ ಗ್ಯಾಸ್ ಸೋರಿಕೆಯಾಗಿ ಇಬ್ಬರೂ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟ್ಕೋಪರ್‌ನಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ದೀಪಕ್ ಶಾ (42) ಹಾಗೂ ರೀನಾ ಶಾ (39) ಮೃತರು. ಇಬ್ಬರೂ ಫ್ಲ್ಯಾಟ್‌ನಲ್ಲಿರುವ ಗೆಳೆಯರ ಜತೆ ಹೋಳಿ ಆಡಿದ್ದಾರೆ. ಮೈತುಂಬ ಬಣ್ಣ ಮೆತ್ತಿದ್ದ ಕಾರಣ ಇಬ್ಬರೂ ಫ್ಲ್ಯಾಟ್‌ಗೆ ತೆರಳಿ, ಬಾತ್‌ರೂಮ್‌ನಲ್ಲಿ ಸ್ನಾನ ಮಾಡಲು ಹೋಗಿದ್ದಾರೆ. ಆದರೆ, ಇದೇ ವೇಳೆ ಇಬ್ಬರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದಂಪತಿಗೆ ಅವರ ಸಂಬಂಧಿಕರು ಪದೇಪದೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸದ ಕಾರಣ ಸಂಬಂಧಿಕರು ಅಪಾರ್ಟ್‌ಮೆಂಟ್‌ಗೆ ಬಂದಿದ್ದಾರೆ. ಫ್ಲ್ಯಾಟ್‌ನ ಪರ್ಯಾಯ ಕೀ ಬಳಸಿ ಬಾತ್‌ರೂಮ್ ಬಾಗಿಲು ತೆರೆದಾಗ ಇಬ್ಬರೂ ಬಿದ್ದಿರುವುದನ್ನು ಕಂಡು ಅವರಿಗೆ ಆಘಾತವಾಗಿದೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
“ದಂಪತಿ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಹಾಗಾಗಿ, ಗೀಸರ್ ಗ್ಯಾಸ್ ಸೋರಿಕೆಯಿಂದಾಗಿ ಇಬ್ಬರೂ ಮೃತಪಟ್ಟಿರುವ ಶಂಕೆ ಇದೆ. ಮರಣೋತ್ತರ ವರದಿ ಬಂದ ಬಳಿಕ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ” ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Holi tragedy : ಹೋಳಿ ಹಲಗೆ ಬಾರಿಸುವ ವಿಚಾರಕ್ಕೆ ಜಗಳ, ಹೊಟ್ಟೆಗೆ ಚಾಕುವಿನಿಂದ ಇರಿದು ಯುವಕನ ಕೊಲೆ