ಮುಂಬಯಿ: ಮುಂಬಯಿಯ ಪರೇಲ್‌ನಲ್ಲಿರುವ, ಶಾಲೆಯನ್ನು ಹೊಂದಿರುವ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ (Mumbai Fire) ಹಾಗೂ ಸ್ಫೋಟ ವರದಿಯಾಗಿದೆ. ಅದೃಷ್ಟವಶಾತ್ ಮಕರ ಸಂಕ್ರಾಂತಿ (Makara sankranthi) ಹಿನ್ನೆಲೆಯಲ್ಲಿ ರಜೆ ಇದ್ದುದರಿಂದ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
ಪರೇಲ್‌ನ ಮಿಂಟ್ ಕಾಲೋನಿಯ ಮಾನೋರೈಲ್ ನಿಲ್ದಾಣದ ಬಳಿ ಶಾಲೆಯಲ್ಲಿ ಸೋಮವಾರ ಬೆಳಗ್ಗೆ 9:10ಕ್ಕೆ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿತು. ಇದು ಬೃಹನ್‌ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಸಾಯಿಬಾಬಾ ಶಾಲೆ ಎಂದು ಗೊತ್ತಾಗಿದೆ. ಮಕರ ಸಂಕ್ರಾಂತಿ ನಿಮಿತ್ತ ರಜೆ ಇದ್ದ ಕಾರಣ ಶಾಲೆಯೊಳಗೆ ವಿದ್ಯಾರ್ಥಿಗಳಿರಲಿಲ್ಲ. ಇಲ್ಲಿಯವರೆಗೆ ಯಾವುದೇ ಗಾಯಗಳು ಅಥವಾ ಸಾವು ನೋವುಗಳು ವರದಿಯಾಗಿಲ್ಲ.
ಐದು ಅಂತಸ್ತಿನ ಶಾಲಾ ಕಟ್ಟಡಕ್ಕೆ ಹೊಂದಿಕೊಂಡಿರುವ ಹಾಲ್‌ಗೆ ಬೆಂಕಿ ವ್ಯಾಪಿಸಿದೆ. ಸಭಾಂಗಣದ ಒಳಗೆ ಹಾಸಿಗೆಗಳಿದ್ದವು. ಇದು ಬೆಂಕಿಯ ಹರಡುವಿಕೆಯನ್ನು ಮತ್ತಷ್ಟು ಹೆಚ್ಚಿಸಿತು. ಹಾಸಿಗೆಗಳ ಬಳಿ ವಿದ್ಯುತ್ ಸಾಕೆಟ್‌ಗಳು ಇದ್ದವು. ಇದರ ಪರಿಣಾಮವಾಗಿ 2-3 ಸ್ಫೋಟಗಳು ಸಂಭವಿಸಿದವು.
ನೆಲಮಹಡಿ ಮತ್ತು ಮೇಲಿನ ನಾಲ್ಕು ಅಂತಸ್ತಿನ BMC ಶಾಲಾ ಕಟ್ಟಡದ ನೆಲ ಮಹಡಿಯಲ್ಲಿ ವಿದ್ಯುತ್ ವೈರಿಂಗ್, ವಿದ್ಯುತ್ ಅಳವಡಿಕೆ ಇತ್ಯಾದಿಗಳಿಗೆ ಬೆಂಕಿ ಹಬ್ಬಿದೆ. ಇದು ಮೊದಲ ಹಂತದ ಬೆಂಕಿ ಆಕಸ್ಮಿಕವಾಗಿದ್ದು, ನಾಲ್ಕು ಅಗ್ನಿಶಾಮಕ ವಾಹನಗಳು ಮತ್ತು ನಾಲ್ಕು ನೀರಿನ ಟ್ಯಾಂಕರ್‌ಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸಿವೆ. ಬೆಂಕಿಯಿಂದಾಗಿ ಮಾನೋರೈಲ್ ಸೇವೆಗಳಿಗೆ ಯಾವುದೇ ತೊಂದರೆಯಾಗಿಲ್ಲ.
ಇದನ್ನೂ ಓದಿ: Karnataka Weather : ಬೆಂಗಳೂರಲ್ಲಿ ವಿಮಾನಗಳ ಹಾರಾಟಕ್ಕೆ ಅಡ್ಡಿಯಾದ ದಟ್ಟ ಮಂಜು; ನಾಳೆ ಹೇಗಿರಲಿದೆ ಹವಾಮಾನ