ಮುಂಬೈ: 3 ಈಡಿಯಟ್ಸ್ ಸಿನಿಮಾ ನೋಡಿದವರಿಗೆ ಆ ಭಾವುಕ ದೃಶ್ಯ ನೆನಪಿದ್ದೇ ಇರುತ್ತದೆ. ಜೋರು ಮಳೆಯಿಂದ ಕರೆಂಟ್ ಕೈಕೊಟ್ಟಾಗ 3 ಈಡಿಯಟ್ಸ್ ಸೇರಿ ಎಲ್ಲರೂ ಬ್ಯಾಟರಿ ಮೂಲಕ, ವ್ಯಾಕ್ಯೂಮ್ ಕ್ಲೀನರ್ ಬಳಸಿ ಮಹಿಳೆಯೊಬ್ಬರ ಹೆರಿಗೆ ಮಾಡಿಸುತ್ತಾರೆ. ಆದರೆ, ಮುಂಬೈನ (Mumbai) ಸರ್ಕಾರಿ ಆಸ್ಪತ್ರೆಯೊಂದರಲ್ಲಿ (Government Hospital) ಮೂಲ ಸೌಕರ್ಯವಿಲ್ಲದೆ, ಮೊಬೈಲ್ ಟಾರ್ಚ್ ಬಳಸಿ ಮಹಿಳೆಯ ಹೆರಿಗೆ ಮಾಡಿದ್ದಾರೆ. ಹೆರಿಗೆ ಬಳಿಕ ತಾಯಿ ಹಾಗೂ ಮಗು ಮೃತಪಟ್ಟಿದ್ದು, ಮನ ಕಲಕುವ ಘಟನೆಯು ಜನರ ಆಕ್ರೋಶ ಕೆರಳಿಸಿದೆ.
ಹೌದು, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ವ್ಯಾಪ್ತಿಯ ಸುಷ್ಮಾ ಸ್ವರಾಜ್ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದ ಕಾರಣ ಆಸ್ಪತ್ರೆ ಸಿಬ್ಬಂದಿಯು ಸಹಿದುನ್ ಎಂಬ ಮಹಿಳೆಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿದ್ದಾರೆ. ಸರಿಯಾದ ಮೂಲ ಸೌಕರ್ಯ, ಚಿಕಿತ್ಸೆ ಸಿಗದೆ, ಹೆರಿಗೆ ಬಳಿಕ ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆ. ಖುಸ್ರುದ್ದೀನ್ ಅನ್ಸಾರಿ ಅವರು 11 ತಿಂಗಳ ಹಿಂದಷ್ಟೇ ಸಹಿದುನ್ ಅವರನ್ನು ಮದುವೆಯಾಗಿದ್ದರು. ಮದುವೆಯಾದ ಕೆಲವೇ ತಿಂಗಳಿಗೆ ಸಹಿದುನ್ ಗರ್ಭಿಣಿಯಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಮೂಲ ಸೌಕರ್ಯ, ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕುಟುಂಬಸ್ಥರು ಹೇಳುವುದೇನು?
ಹೆರಿಗೆ ಮಾಡಿಸುವ ಕೋಣೆಯಲ್ಲಿ ವಿದ್ಯುತ್ ಕಡಿತವಾಗಿದೆ. ಸಿಸೇರಿಯನ್ ಮಾಡುವಾಗಲೇ ವಿದ್ಯುತ್ ಕೈಕೊಟ್ಟ ಕಾರಣ ಆಪರೇಷನ್‌ಗೆ ತೊಂದರೆಯಾಗಿದೆ. ಇನ್ನು ಮೂರು ಗಂಟೆಯಿಂದ ಜನರೇಟರ್ ಆನ್ ಆಗಿಲ್ಲ. ಇದಾದ ಬಳಿಕ ವೈದ್ಯರು ಮೊಬೈಲ್ ಬ್ಯಾಟರಿ ಬಳಸಿ ಆಪರೇಷನ್ ಮಾಡಿದ್ದಾರೆ. ಇದರಿಂದಾಗಿ ನನ್ನ ಪತ್ನಿ ಹಾಗೂ ಮಗುವನ್ನು ಕಳೆದುಕೊಳ್ಳಬೇಕಾಯಿತು ಎಂದು ಮಹಿಳೆಯ ಕುಟುಂಬಸ್ಥರು ದೂರಿದ್ದಾರೆ. ಅಷ್ಟೇ ಅಲ್ಲ, ಆಸ್ಪತ್ರೆ ಹೊರಗೆ ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣವನ್ನು ಬಿಎಂಸಿಯು ತನಿಖೆಗೆ ಆದೇಶಿಸಿದೆ. ಏಪ್ರಿಲ್ 29ರಂದು ಡೆಲಿವರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಿಎಂಸಿ ಬಜೆಟ್ 52 ಸಾವಿರ ಕೋಟಿ ರೂ.
ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನ ವಾರ್ಷಿಕ ಬಜೆಟ್ 52 ಸಾವಿರ ಕೋಟಿ ರೂ. ಆಗಿದೆ. ಆರೋಗ್ಯ ಕ್ಷೇತ್ರಕ್ಕಾಗಿಯೇ ಆಸ್ಪತ್ರೆಯು 6,250 ಕೋಟಿ ರೂ. ಮೀಸಲಿರಿಸಿದೆ. ಇಷ್ಟಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳು, ವೈದ್ಯಕೀಯ ಉಪಕರಣಗಳು ಬಿಡಿ, ಕನಿಷ್ಠ ಸಮರ್ಪಕ ವಿದ್ಯುತ್, ವಿದ್ಯುತ್ ಕೈಕೊಟ್ಟರೆ ಇನ್ವರ್ಟರ್ ಸೇರಿ ಯಾವುದೇ ಸೌಕರ್ಯಗಳು ಇಲ್ಲದಿರುವುದು ಸಾಮಾನ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ಆಸ್ಪತ್ರೆಗೆ ಹೋದರೆ ಲಕ್ಷಾಂತರ ರೂ. ಕೊಡಬೇಕು, ದುಡ್ಡಿಲ್ಲದ ಕಾರಣ ಸರ್ಕಾರಿ ಆಸ್ಪತ್ರೆಗೆ ಹೋದರೆ ಪ್ರಾಣವನ್ನೇ ತ್ಯಾಗ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Medical Negligence : ಸಕಾಲಕ್ಕೆ ಸಿಗದ ಚಿಕಿತ್ಸೆ; ಹೆರಿಗೆಗೂ ಮೊದಲೇ ತಾಯಿ-ಮಗು ಸಾವು