Site icon Vistara News

Urination Case | ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದವನನ್ನು ವಜಾಗೊಳಿಸಿದ ಅಮೆರಿಕ ಕಂಪನಿ

ನವದೆಹಲಿ/ವಾಷಿಂಗ್ಟನ್‌: ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ ವಿಕೃತಿ ಮೆರೆದ (Urination Case) ಶಂಕರ್‌ ಮಿಶ್ರಾನನ್ನು ಅಮೆರಿಕದ ವೆಲ್ಸ್‌ ಫಾರ್ಗೊ ಕಂಪನಿಯು ಕೆಲಸದಿಂದ ವಜಾಗೊಳಿಸಿದೆ. ಮುಂಬೈ ಮೂಲದ ಶಂಕರ್‌ ಮಿಶ್ರಾ ನವೆಂಬರ್‌ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುವಾಗ ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ತಡವಾಗಿ ಸುದ್ದಿಯಾದ ಬೆನ್ನಲ್ಲೇ ವೆಲ್ಸ್‌ ಫಾರ್ಗೊ ಕಠಿಣ ಕ್ರಮ ತೆಗೆದುಕೊಂಡಿದೆ.

“ಉದ್ಯೋಗಿಗಳು ಉತ್ಕೃಷ್ಟ ವೃತ್ತಿಪರತೆ ಹಾಗೂ ಉತ್ತಮ ನಡವಳಿಕೆ ಹೊಂದಿರಬೇಕು ಎಂಬುದು ವೆಲ್ಸ್‌ ಫಾರ್ಗೊ ಕಂಪನಿಯ ನಿರೀಕ್ಷೆಯಾಗಿದೆ. ಆದರೆ, ಶಂಕರ್‌ ಮಿಶ್ರಾ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವ ಕಾರಣ ಅವರನ್ನು ಕೆಲಸದಿಂದ ವಜಾಗೊಳಿಸಿದೆ” ಎಂದು ಕಂಪನಿ ತಿಳಿಸಿದೆ.

ನವೆಂಬರ್‌ 26ರಂದು ಶಂಕರ್‌ ಮಿಶ್ರಾ ಮಾಡಿದ ಕೃತ್ಯದ ಕುರಿತು ಮಹಿಳೆಯು ಕೆಲ ದಿನಗಳ ಬಳಿಕ ಏರ್‌ ಇಂಡಿಯಾ ಅಧ್ಯಕ್ಷ ಎನ್‌.ಚಂದ್ರಶೇಖರನ್‌ ಅವರಿಗೆ ಘಟನೆ ಕುರಿತು ಪತ್ರದ ಮೂಲಕ ಮಾಹಿತಿ ನೀಡಿದ್ದರು. ನಂತರ ಇದರ ಕುರಿತು ಮಾಧ್ಯಮಗಳಲ್ಲೂ ವರದಿಯಾದ ಕಾರಣ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ.

ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ
ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಸುದ್ದಿಯಾಗುತ್ತಲೇ ಶಂಕರ್‌ ಮಿಶ್ರಾ ತಲೆಮರೆಸಿಕೊಂಡಿದ್ದು, ಕೆಲ ದಿನಗಳವರೆಗೆ ಬೆಂಗಳೂರಿನಲ್ಲಿದ್ದ ಎಂದು ದೆಹಲಿ ಪೊಲೀಸ್‌ ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿರುವ ಸಹೋದರಿಯ ನಿವಾಸದಲ್ಲಿ ಕೆಲ ದಿನಗಳವರೆಗೆ ಶಂಕರ್‌ ಮಿಶ್ರಾ ಇದ್ದ ಎಂದು ತಿಳಿದುಬಂದಿದೆ. ಈತನನ್ನು ಬಂಧಿಸಲು ದೆಹಲಿ ಪೊಲೀಸರು ಎರಡು ತಂಡ ರಚಿಸಿದ್ದಾರೆ. ಹಾಗೆಯೇ, ವಿದೇಶಕ್ಕೆ ಪರಾರಿಯಾಗುವುದನ್ನು ತಡೆಯಲು ಲುಕ್‌ ಔಟ್‌ ನೋಟಿಸ್‌ ಕೂಡ ಜಾರಿ ಮಾಡಲಾಗಿದೆ.

ಇದನ್ನೂ ಓದಿ | Air India | ಕುಡುಕ ಮೈಮೇಲೆ ಮೂತ್ರ ವಿಸರ್ಜಿಸಿದರೂ, ಮಹಿಳೆಗೆ ಬೇರೆ ಸೀಟು ನಿರಾಕರಿಸಿದ್ದ ಏರ್‌ ಇಂಡಿಯಾ ಪೈಲಟ್!

Exit mobile version