ಮುಂಬೈ, ಮಹಾರಾಷ್ಟ್ರ: ಸರ್ಕಾರ ಹಾಗೂ ವ್ಯವಸ್ಥೆಯ ವಿರುದ್ಧ ಹಾಡು ಬರೆದ ರ್ಯಾಪರ್ (Rapper) ವಿರುದ್ಧ ಮಹಾರಾಷ್ಟ್ರದ ಮುಂಬೈನಲ್ಲಿ (Mumbai Police) ಕೇಸ್ ದಾಖಲಿಸಲಾಗಿದೆ. ಸರ್ಕಾರದ ವಿರುದ್ದ ಹಾಡು ಬರೆದವರ ವಿರುದ್ದ ಕೇಸ್ ದಾಖಲು ಮಾಡುತ್ತಿರುವುದು ಒಂದೇ ವಾರದಲ್ಲಿ ಇದು ಎರಡನೇ ಪ್ರಕರಣವಾಗಿದೆ.
ಈಗಿನ ಪ್ರಕರಣದಲ್ಲಿ ಮುಂಬೈ ಪೊಲೀಸ್ ಕ್ರೈಮ್ ಬೇಹುಗಾರಿಕಾ ಘಟಕದ ಪೊಲೀಸ್ ಅಧಿಕಾರಿಗಳು ದೂರು ನೀಡಿದ್ದಾರೆ. ರ್ಯಾಪರ್ ಉಮೇಶ್ ಖಾಡೆ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಾಗಿದೆ. ಈ ರ್ಯಾಪರ್ ಮುಂಬೈನ ವಾಡಲಾ ಪ್ರದೇಶದಲ್ಲಿ ವಾಸವಾಗಿದ್ದಾರೆ. ಉಮೇಶ್ ಅವರು, ಬೋಂಗ್ಲಿ ಕೇಲಿ ಜನತಾ(ಬಳಲಿದ ಮುಖದ ಜನರು) ಎಂಬ ರ್ಯಾಪ್ ಸಾಂಗ್ ಬರೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಾಡನ್ನು ಖಾಡೆ ಅವರು ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಶಂಭೋ ಎಂಬ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದರು. ಅಪ್‌ಲೋಡ್ ಆಗುತ್ತಿದ್ದಂತೆ ಸಾಂಗ್ ಫುಲ್ ವೈರಲ್ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆ 504, 505(2) ಹಾಗೂ 2000 ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅನ್ವಯ ಉಮೇಶ್ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಗುರುವಾರ ರ್ಯಾಪರ್ ಉಮೇಶ್ ಖಾಡೆ ಅವರನ್ನು ಕರೆಯಿಸಿ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆ ನಂತರ ಅವರನ್ನು ವಾಪಸ್ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಎಫ್ಐಆರ್ ದಾಖಲಾದ ಬಳಿಕ ಖಾಡೆ ಅವರಿಗೆ ನೋಟಿಸ್ ಜಾರಿ ಮಾಡಿ, ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ಉಮೇಶ್ ಖಾಡೆ ಅವರನ್ನು ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Urfi Javed | ಉರ್ಫಿ ಜಾವೇದ್ ಕುರಿತು ಮುಂಬೈ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ
ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಖಂಡಿಸಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿಯ ನಾಯಕ ಜಿತೇಂದ್ರ ಅವ್ಹಾದ್ ಅವರು, ಖಾಡೆ ಹಾಡಿನಲ್ಲಿ ಯಾವುದೇ ಅಪಮಾನಕಾರಿ ಸಂಗತಿಗಳು ಇಲ್ಲ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಥಾಣೆ ಜಿಲ್ಲೆಯ ನೆರೆಯ ಅಂಬರನಾಥ್ ಪೊಲೀಸರು ಬುಧವಾರ ರ್ಯಾಪರ್ ರಾಜ್ ಮುಂಗ್ಸೆ ಅವರ ವಿರುದ್ಧ ಕೇಸ್ ದಾಖಲಿಸಿದ್ದರು. ಮುಂಗ್ಸೆ ಅವರು, ಯಾರನ್ನ ಹೆಸರಿಸಿದೇ ಶಿವಸೇನಾ-ಬಿಜೆಪಿ ಸರ್ಕಾರವನ್ನು ಟೀಕಿಸಿ ಹಾಡು ಬರೆದಿದ್ದರು. ಈ ಹಾಡು ಕೂಡ ವೈರಲ್ ಆಗಿತ್ತು.