Site icon Vistara News

Bomb Threat: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ; 26/11 ರೀತಿ ದಾಳಿಗೆ ಸಂಚು?

Bomb Threat

Mumbai Police receives bomb threat call to blow up Taj Hotel, airport

ಮುಂಬೈ: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿರುವ ಶಾಲೆಗಳು, ವಿಮಾನ ನಿಲ್ದಾಣಗಳನ್ನು ಬಾಂಬಿಟ್ಟು ಸ್ಫೋಟಿಸುವ ಕುರಿತು ಕೆಲ ತಿಂಗಳಿಂದ ಬೆದರಿಕೆ ಕರೆಗಳು (Bomb Threat) ಬರುತ್ತಲೇ ಇವೆ. ಇದರ ಬೆನ್ನಲ್ಲೇ, ಮುಂಬೈನಲ್ಲಿರುವ ತಾಜ್‌ ಹೋಟೆಲ್‌ (Taj Hotel) ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣವನ್ನು (Chhatrapati Shivaji Maharaj International Airport) ಸ್ಫೋಟಿಸುವ ಕುರಿತು ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದೆ. ಹಾಗಾಗಿ, ಮುಂಬೈ ತಾಜ್‌ ಹೋಟೆಲ್‌ ಹಾಗೂ ವಿಮಾನ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.

“ಮುಂಬೈ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿದೆ. ತಾಜ್‌ ಹೋಟೆಲ್‌ ಹಾಗೂ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಲಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಬ್ಲಾಸ್ಟ್‌ ಆಗಬಹುದು” ಎಂದಷ್ಟೇ ಹೇಳಿ ಕರೆ ಕಟ್ ಮಾಡಿದ್ದಾನೆ. ಇದಾದ ಬಳಿಕ ಪೊಲೀಸರು ಅಲರ್ಟ್‌ ಆಗಿದ್ದಾರೆ” ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ತಾಜ್‌ ಹೋಟೆಲ್‌ ಮೇಲೆ 26/11ರ ಮಾದರಿಯಲ್ಲಿ ದಾಳಿ ನಡೆಯುವ ಭೀತಿಯಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು ಎನ್ನಲಾಗಿದೆ.

ಬಾಂಬ್‌ ಬೆದರಿಕೆ ಕರೆ ಬರುತ್ತಲೇ ಪೊಲೀಸರು ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯು ಹೋಟೆಲ್‌ ಹಾಗೂ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಎರಡೂ ಕಡೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಉತ್ತರ ಪ್ರದೇಶದಿಂದ ಕರೆ ಬಂದಿದೆ ಎಂಬುದು ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ, ದೇಶದ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಗೆ ಬೆದರಿಕೆಯ ಮೇಲ್‌ ಬಂದಿತ್ತು. ಬೆಂಗಳೂರು, ದೆಹಲಿ, ಅಹಮದಾಬಾದ್‌, ಚೆನ್ನೈ ಸೇರಿ ಹಲವು ನಗರಗಳ ಶಾಲೆಗಳನ್ನೂ ಸ್ಫೋಟಿಸುವ ಬೆದರಿಕೆ ಕರೆಗಳು ಬಂದಿದ್ದವು. ಬಳಿಕ ನಕಲಿ ಬಾಂಬ್‌ ಬೆದರಿಕೆ ಎಂಬುದಾಗಿ ತಿಳಿದುಬಂದಿತ್ತು.

ಮುಂಬೈ ದಾಳಿ ಕರಾಳ ಅಧ್ಯಾಯ

ಮುಂಬೈನಲ್ಲಿರುವ ತಾಜ್​ ಹೋಟೆಲ್​ಗಳ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿ ಇಂದಿಗೂ ನಮ್ಮ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಅದನ್ನೊಂದು ಕರಾಳ ದಿನವೆಂದೇ ಪರಿಗಣಿಸಲಾಗುತ್ತದೆ. ಅಂದು ಲಷ್ಕರೆ ತಯ್ಬಾ ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ಬಂದು ಗುಂಡಿನ ದಾಳಿ ನಡೆಸಿದ್ದರು. ನವೆಂಬರ್ 26ರಿಂದ 29ರವರೆಗೆ ಭದ್ರತಾ ಪಡೆಗಳು-ಉಗ್ರರ ನಡುವಿನ ಹೋರಾಟ ನಡೆದಿತ್ತು. ಇದರಲ್ಲಿ ಆರು ಮಂದಿ ಅಮೇರಿಕದವರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಲವು ಯೋಧರು ಕೂಡ ಹುತಾತ್ಮರಾಗಿದ್ದರು.

ಇದನ್ನೂ ಓದಿ: Bomb Threat : ಶಾಲೆಗೆ ಬಾಂಬ್​ ಬೆದರಿಕೆ ಮೇಲ್ ಕಳುಹಿಸಿದ ವಿದ್ಯಾರ್ಥಿಗಳು!

Exit mobile version