ಮುಂಬಯಿ: ಹೆಚ್ಚು ಕಡಿಮೆ ಸಮುದ್ರ ಮಟ್ಟದಲ್ಲೇ ಇರುವ ಮುಂಬಯಿ ಮಹಾನಗರಿಗೆ ಈಗ ಮುಳುಗುವ ಅಪಾಯ ಎದುರಾಗಿದೆ. ಸಮುದ್ರ ತೀರದಲ್ಲಿರುವ ಜಗತ್ತಿನ ಹಲವು ನಗರಗಳು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿವೆ. ಕೆಲವು ನಗರಗಳಂತೂ ಅತ್ಯಂತ ವೇಗವಾಗಿ ಮುಳುಗುವ ಹಾದಿಯಲ್ಲಿವೆ. ಮುಂಬಯಿ ನಗರ ವರ್ಷಕ್ಕೆ ಸರಾಸರಿ 2 ಮಿ.ಮೀ. ಮುಳುಗುತ್ತಿದೆ (Mumbai sinking) ಎನ್ನಲಾಗಿದ್ದು, ನಗರ ಯೋಜನಾ ಪರಿಣತರು ಇದರ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ಜಿಯೋ ಫಿಸಿಕಲ್ ರಿಸರ್ಚ್ ಲೆಟರ್ಸ್ ಜರ್ನಲ್‌ನಲ್ಲಿ ಇತ್ತೀಚೆಗೆ ಈ ಬಗ್ಗೆ ವಿಸ್ತೃತ ವರದಿಯೊಂದು ಪ್ರಕಟಗೊಂಡಿದೆ. ಇದಕ್ಕಾಗಿ ಜಗತ್ತಿನ 99 ಕರಾವಳಿ-ನಗರಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 2015ರಿಂದ 2020ರ ಅವಧಿಯಲ್ಲಿ ಈ ನಗರಗಳ ಕುಸಿತದ ಪ್ರಮಾಣವೆಷ್ಟು ಎಂಬುದನ್ನು ಇಂಟರ್‌ಫೆರೋಮೆಟ್ರಿಕ್ ಸಿಂಥೆಟಿಕ್ ಅಪಾರ್ಚರ್ ರಾಡಾರ್ ಅಥವಾ ಇನ್‌ಸರ್ (InSAR) ತಂತ್ರಜ್ಞಾನದ ಮೂಲಕ ಅಭ್ಯಸಿಸಲಾಗಿತ್ತು. ಈ ಎಲ್ಲಾ ನಗರಗಳ ಪೈಕಿ ಚೀನಾದ ಟಿಯಾನ್ಜಿನ್ ವಿಶ್ವದಲ್ಲೇ ತ್ವರಿತವಾಗಿ ಮುಳುಗುತ್ತಿರುವ ನಗರವಾಗಿದ್ದು, ವಾರ್ಷಿಕ 52 ಸೆಂ.ಮೀ. ನಷ್ಟು ನೀರಿನೊಳಗೆ ಕುಸಿಯುತ್ತಿದೆ.
ಏಕೆ ಕುಸಿಯುತ್ತಿವೆ?
ಇದಕ್ಕೆ ಕಾರಣಗಳು ಹಲವು. ಭೂಮಿ ಹೀಗೆ ಆಳಕ್ಕೆ ನಿಧಾನವಾಗಿ, ಶಾಶ್ವತವಾಗಿ ಕುಸಿಯುವ ಪ್ರಕ್ರಿಯೆ ಕೆಲವೊಮ್ಮೆ ನೈಸರ್ಗಿಕವಾಗಿಯೂ ಸಂಭವಿಸುತ್ತದೆ. ಕೆಲವೊಮ್ಮೆ ನಿಸರ್ಗದ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪದಿಂದ ಸಂಭವಿಸುತ್ತಿದೆ. ಅತಿಯಾದ ನಾಗರಿಕತೆಗೆ ಒಳಪಡುತ್ತಿರುವ ಎಲ್ಲಾ ನಗರಗಳಲ್ಲಿ, ಅಂತರ್ಜಲದ ಅತಿಯಾದ ಬಳಕೆ, ಗಣಿಗಾರಿಕೆ, ದಿಕ್ಕೆಟ್ಟ ಅಭಿವೃದ್ಧಿ ಯೋಜನೆಗಳು, ನೈಸರ್ಗಿಕ ಜಲಮೂಲಗಳ ಅವಸಾನದಂಥ ಕಾರಣಗಳು ಭೂಮಿ ಮುಳುಗುವುದಕ್ಕೆ ಪ್ರಧಾನವಾಗುತ್ತವೆ. ಅಮೆರಿಕದ ರೋಡ್ ಐಲೆಂಡ್ ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ಪ್ರಕಟವಾಗಿದ್ದ ಇಂಥದ್ದೇ ವರದಿಯ ಪ್ರಕಾರ, ಮುಂಬಯಿಯಲ್ಲಿ ಸಮುದ್ರ ಮಟ್ಟದಿಂದ 10 ಮೀ.ಗೂ ಕಡಿಮೆ ಎತ್ತದರಲ್ಲಿರುವ ಸುಮಾರು 46 ಚದರ ಕಿ.ಮೀ. ಭೂಮಿ ಅತಿಹೆಚ್ಚು ಪ್ರವಾಹಕ್ಕೆ ತುತ್ತಾಗುತ್ತಿದೆ. 19 ಚದರ ಕಿ.ಮೀ. ಭೂಮಿ ವಾರ್ಷಿಕವಾಗಿ ಸರಾಸರಿ 2 ಮಿ.ಮೀ. ನೀರಿನಾಳಕ್ಕೆ ಶಾಶ್ವತವಾಗಿ ಕುಸಿಯುತ್ತಿದೆ. ಅದರಲ್ಲೂ ಕೆಲವು ಕಡೆಗಳಲ್ಲಿ ವಾರ್ಷಿಕ ೮.೫ ಮಿ.ಮೀ. ಕುಸಿತವೂ ದಾಖಲಾಗಿದೆ.
ಮುಂಬಯಿ ಹೊರತಾಗಿ, ಇಂಡೋನೇಷ್ಯಾದ ಸೆಮರಂಗ್ (396 ಸೆ.ಮೀ. ವಾರ್ಷಿಕ) ಮತ್ತು ಜಕಾರ್ತ (34 ಸೆ.ಮೀ. ವಾರ್ಷಿಕ), ಚೀನಾದ ಶಾಂಘೈ (2.9 ಸೆ.ಮೀ. ವಾ), ವಿಯೆತ್ನಾಂನ ಹೋ ಚಿ ಮಿನ್ (2.8 ಮಿ.ಮೀ) ಹಾಗೂ ಹನೋಯ್ (2.4 ಸೆ.ಮೀ ವಾ) ಮುಂತಾದ ನಗರಗಳು ಸೇರಿವೆ. ಈ ಎಲ್ಲ ನಗರಗಳಿಗೆ ಹೋಲಿಸಿದರೆ ಮುಂಬಯಿಯಲ್ಲಿ ಕುಸಿತದ ಪ್ರಮಾಣ ಕಡಿಮೆಯೇ ಇದ್ದರೂ, ಮಳೆಯ ಕೋಪಕ್ಕೆ, ಪ್ರವಾಹದ ಪ್ರಕೋಪಕ್ಕೆ ಸಿಲುಕುವ ಪ್ರಮಾಣ ತ್ವರಿತವಾಗಿ ಏರುತ್ತಿದೆ. ಇದರಿಂದಾಗಿ ರಸ್ತೆ, ಸೇತುವೆಗಳು, ದೂರಸಂವಹನದಂಥ ಮೂಲಭೂತ ಸೌಕರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀಳುತ್ತಿದೆ.
ಅಪಾಯದ ಅಡಕತ್ತರಿ
ಇದಲ್ಲದೆ, ಭೂಮಿ ಬಿಸಿಯಾಗುತ್ತಿರುವುದರಿಂದ ಅರಬ್ಬೀ ಸಮುದ್ರವೂ ವಾರ್ಷಿಕವಾಗಿ 3 ಮಿ.ಮೀವರೆಗೆ ಏರುತ್ತಿದ್ದು, ಇಂಥ ದ್ವಿ-ಮುಖ ಅಪಾಯದಿಂದಾಗಿ ಪ್ರವಾಹ ಮತ್ತು ಆಸ್ತಿಪಾಸ್ತಿಗಳ ನಷ್ಟದ ಪ್ರಮಾಣವೂ ಹೆಚ್ಚುತ್ತಿದೆ. ನಗರಯೋಜನಾ ತಜ್ಞರು ಈ ಇಕ್ಕಟ್ಟಿನಿಂದ ಪಾರಾಗಲು ಉಪಾಯಗಳನ್ನು ಹುಡುಕಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಮುಂಬಯಿಯಲ್ಲಿ ಅಂದಾಜು ಎರಡು ಕೋಟಿ ಜನ ವಾಸಿಸುತ್ತಿದ್ದಾರೆ.
ಮುಂಬಯಿಯಯಲ್ಲಿ ಎಲ್ಲಿ ಅಪಾಯ?
ಇದಲ್ಲದೆ, ಮುಂಬಯಿ ಐಐಟಿಯ ಸಂಶೋಧಕರು ನಡೆಸಿದ ಅಂತರ್ ಶಿಸ್ತೀಯ ಅಧ್ಯಯನವೊಂದರಲ್ಲಿ, ಮುಂಬಯಿ ನಗರದ ಕೆಲವು ಭಾಗಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ, ಅಂದರೆ 93 ಮಿ.ಮೀ ವಾರ್ಷಿಕ ಕುಸಿತ ಕಂಡುಬಂದಿದೆ. ಕೊಲಾಬ, ಚರ್ಚಗೇಟ್, ಕಲ್ಬಾ ದೇವಿ, ಕುರ್ಲಾ, ಪೂರ್ವ ಅಂಧೇರಿ, ಮುಲುಂದ್, ದಾದರ್ ಮುಂತಾದ ಕಡೆಗಳಲ್ಲಿ ಮುಂಬಯಿ ನಗರದ ವಾರ್ಷಿಕ ಸರಾಸರಿ ಕುಸಿತಕ್ಕಿಂತ ಹತ್ತಾರು ಪಟ್ಟು ಹೆಚ್ಚು ಕುಸಿತ ದಾಖಲಾಗಿದೆ. ʻಭರತದ ಸಂದರ್ಭದಲ್ಲಿ ಸಮುದ್ರ ಮಟ್ಟದಲ್ಲೂ ಸುಮಾರು 1.3 ಮೀ. ವರೆಗೆ ಏರಿಕೆಯಾಗುವುದರಿಂದ, ಸಾಮಾನ್ಯ ಮಟ್ಟದಲ್ಲಿ ಮಳೆಯಾದರೂ ಶೇ. 38ರಷ್ಟು ಮುಂಬಯಿ ಪ್ರವಾಹಕ್ಕೆ ತುತಾಗುತ್ತದೆʼ ಎಂದು ಈ ಅಧ್ಯಯನದ ಮುಂಚೂಣಿಯಲ್ಲಿರುವ ಸುಧಾ ರಾಣಿ ತಿಳಿಸಿದ್ದಾರೆ.
ಇದನ್ನೂ ಓದಿ| world Environment day | ಪರಿಸರ ಕಾಪಾಡುವ ಆವಿಷ್ಕಾರಗಳ ಅಗತ್ಯವಿದೆ: ಕಾಗೇರಿ ಪ್ರತಿಪಾದನೆ