ನ್ಯೂಯಾರ್ಕ್: 2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭೀಕರ ಉಗ್ರದಾಳಿಯ ಸಂಚುಕೋರ ಸಜೀದ್ ಮಿರ್‌ನನ್ನು ಬಂಧಿಸಿದ್ದಾಗಿ ಪಾಕಿಸ್ತಾನ ಹೇಳಿದೆ. ಇಲ್ಲೊಂದು ವಿಚಿತ್ರ ಎಂದರೆ, ಸಜೀದ್ ಮಿರ್ ಬದುಕಿಯೇ ಇಲ್ಲ, ಆತ ಮೃತಪಟ್ಟಿದ್ದಾನೆ ಎಂದು ಕಳೆದವರ್ಷ ಇದೇ ಪಾಕಿಸ್ತಾನ ಹೇಳಿಕೊಂಡಿತ್ತು ಎಂದು ನಿಕ್ಕಿ ಏಷ್ಯಾ ಎಂಬ ಪತ್ರಿಕೆ ವರದಿ ಮಾಡಿದೆ. ಯುಎಸ್‌ನ ಸಂಯುಕ್ತದಳದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಸಜೀದ್ ಮಿರ್ ಹೆಸರು ಕೂಡ ಇದ್ದು, ಈತನ ತಲೆಗೆ 5ಮಿಲಿಯನ್ ಡಾಲರ್ ಬಹುಮಾನವನ್ನೂ ಘೋಷಿಸಲಾಗಿತ್ತು. ಲಷ್ಕರೆ ತೊಯ್ಬಾದ ಉಗ್ರನಾದ ಮಿರ್‌ಗಾಗಿ ಯುಎಸ್ ಮತ್ತು ಭಾರತ ಎರಡೂ ದೇಶಗಳು ದಶಕಗಳಿಂದಲೂ ಹುಡುಕಾಟ ನಡೆಸಿದ್ದವು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣಕಾಸಿನ ನೆರವು (FATF) ನೀಡುವುದು, ಭಯೋತ್ಪಾದಕ ಕೃತ್ಯಗಳಿಗೆ ಆರ್ಥಿಕ ಬೆಂಬಲ ನೀಡುವವರ ಮೇಲೆ ಕಣ್ಣಿಡುವ ಹಣಕಾಸು ಕಾರ್ಯಪಡೆ ಪಾಕಿಸ್ತಾನವನ್ನು ಬೂದುಪಟ್ಟಿಗೆ ಸೇರಿಸಿ ಬಹುಕಾಲವಾಗಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿದೆ ಎಂಬ ಆರೋಪ ಈಗಿನದಲ್ಲ. ಈ ಆಪಾದನೆಯನ್ನು ಹೋಗಲಾಡಿಸಿಕೊಳ್ಳಲು, ಹಣಕಾಸು ಕಾರ್ಯಪಡೆಯ ಕಪ್ಪು ಪಟ್ಟಿಗೆ ಸೇರದೆ ಇರುವ ಮತ್ತು ಆ ಪಟ್ಟಿಯಿಂದಲೇ ಹೊರಬೀಳುವ ಪ್ರಯತ್ನದ ಭಾಗವಾಗಿ ಈಗ ಪಾಕಿಸ್ತಾನ ತಾನೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳುತ್ತಿರುವುದಲ್ಲದೆ, ಮಿರ್‌ನನ್ನು ಬಂಧಿಸಿದ್ದಾಗಿಯೂ ಮಾಹಿತಿ ನೀಡಿದೆ.
೨೦೦೮ರಲ್ಲಿ ಮುಂಬೈನ ತಾಜ್ ಹೋಟೆಲ್‌ಗಳ ಮೇಲೆ ಭೀಕರ ದಾಳಿಯಾಗಿತ್ತು. ಅಂದು ಲಷ್ಕರೆ ತೊಯ್ಬಾದ ಸುಮಾರು ೧೦ ಉಗ್ರರು ನಡೆಸಿದ್ದ ಗುಂಡು-ಬಾಂಬ್ ದಾಳಿಗೆ 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇಲ್ಲಿ ಭಾರತೀಯರಷ್ಟೇ ಅಲ್ಲ, ಹೋಟೆಲ್‌ನಲ್ಲಿದ್ದ ಇತರ ದೇಶಗಳ ಪ್ರವಾಸಿಗರೂ ಬಲಿಯಾಗಿದ್ದರು. ಆ ದಿನವನ್ನೂ ಇಂದಿಗೂ ಕರಾಳ ದಿನವೆಂದೇ ಆಚರಿಸಲಾಗುತ್ತದೆ. ಲಷ್ಕರೆ ತೊಯ್ಬಾದ ಈ ದಾಳಿಗೆ ಕುಮ್ಮಕ್ಕು ಕೊಟ್ಟಿದ್ದು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ಎಂಬುದೇನೂ ಗುಟ್ಟಾಗಿ ಉಳಿದಿಲ್ಲ.
ಇದನ್ನೂ ಓದಿ: ಸಿಮ್ ಬಾಕ್ಸ್ ಮೂಲಕ ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಖಚಿತ: ಸಿಸಿಬಿ ಯಿಂದ ತೀವ್ರ ತನಿಖೆ