ಲಖನೌ: ಪಬ್ಜಿ ಆನ್‌ಲೈನ್ ಗೇಮ್ (PUBG Game) ಗೀಳಿಗೆ ಸಿಲುಕಿ ಪ್ರಾಣ ಕಳೆದುಕೊಂಡವರಿದ್ದಾರೆ. ದಿನವಿಡೀ ಪಬ್ಜಿ ಗೇಮ್ ಆಡಿ ಪರೀಕ್ಷೆಯಲ್ಲಿ ಫೇಲ್ ಆದವರಿದ್ದಾರೆ. ಗೆಳೆಯರ ಜತೆ ಜಗಳ ಆಡಿದವರಿದ್ದಾರೆ. ಆದರೆ, ಮಹಾರಾಷ್ಟ್ರದ ಯುವತಿಯೊಬ್ಬರ ಬಾಳನ್ನೇ ಪಬ್ಜಿ ಆನ್‌ಲೈನ್ ಗೇಮ್ ನರಕ ಮಾಡಿದೆ. ಹೌದು, ಪಬ್ಜಿ ಆಡುವಾಗ ಪರಿಚಯವಾದ ಮುಸ್ಲಿಂ ಯುವಕನನ್ನು (PUBG Love) ಮದುವೆಯಾದ ಮಹಾರಾಷ್ಟ್ರದ (Maharashtra) ಯುವತಿಯು ಈಗ ಆತನ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮಹಾರಾಷ್ಟ್ರದ ಮುಂಬೈನವರಾದ ಹರ್ಷದಾ ಹಾಗೂ ಉತ್ತರ ಪ್ರದೇಶದ ಮೊಹಮ್ಮದ್ ಫುಜೈಲ್ ಅವರು ಆನ್‌ಲೈನ್‌ನಲ್ಲಿ ಪಬ್ಜಿ ಆಡುವಾಗ ಪರಿಚಯ ಮಾಡಿಕೊಂಡಿದ್ದಾರೆ. ಇಬ್ಬರ ನಡುವಿನ ಪರಿಚಯವು ಪ್ರೇಮಕ್ಕೆ ತಿರುಗಿದೆ. ಮನೆಯವರ ವಿರೋಧದ ಮಧ್ಯೆಯೂ ಹರ್ಷದಾ ಅವರು ಮೊಹಮ್ಮದ್ ಫುಜೈಲ್‌ನನ್ನು ಮದುವೆಯಾಗಿದ್ದಾರೆ. ಅಷ್ಟೇ ಅಲ್ಲ, ಮದುವೆಗೂ ಮುನ್ನ ಹರ್ಷದಾ ಅವರು ಇಸ್ಲಾಂಗೆ ಮತಾಂತರಗೊಂಡಿದ್ದು, ಫಾತಿಮಾ ಎಂಬುದಾಗಿ ಹೆಸರು ಬದಲಾಯಿಸಿಕೊಂಡಿದ್ದಾರೆ.
ಬಳಿಕ ನಡೆದಿದ್ದೇ ದುರಂತ
ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಗಲ್‌ಶಾಹಿದ್ ಥಾಣಾ ಪ್ರದೇಶದಲ್ಲಿ ಮೊಹಮ್ಮದ್ ಫುಜೈಲ್ ಹಾಗೂ ಫಾತಿಮಾ ವಾಸವಿದ್ದರು. ಆದರೆ, ಕೆಲ ತಿಂಗಳಿಂದ ಮೊಹಮ್ಮದ್ ಫುಜೈಲ್ ಫಾತಿಮಾಗೆ ಕಿರುಕುಳ ನೀಡಿದ್ದಾನೆ. ಆಕೆಯ ಮೇಲೆ ನಿರಂತರವಾಗಿ ಹಲ್ಲೆ ನಡೆಸಿದ್ದಾನೆ. ಕೆಲ ದಿನಗಳ ಹಿಂದೆ ಫಾತಿಮಾ ಅವರ ತಾಯಿ ಮಾಧುರಿ ಮಿತ್ರ ಅವರಿಗೆ ಕರೆ ಮಾಡಿದ ಮೊಹಮ್ಮದ್ ಫುಜೈಲ್, “ನಿಮ್ಮ ಪುತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅವರ ಸ್ಥಿತಿ ಗಂಭೀರವಾಗಿದೆ. ಕೂಡಲೇ ಬನ್ನಿ” ಎಂಬುದಾಗಿ ಹೇಳಿದ್ದಾನೆ. ಮಾಧುರಿ ಮಿತ್ರ ಅವರು ಕೂಡಲೇ ಮೊರಾದಾಬಾದ್‌ಗೆ ತೆರಳಿದಾಗ ಮಗಳ ಸ್ಥಿತಿ ಗಂಭೀರವಾಗಿರುವುದನ್ನು ಕಂಡಿದ್ದಾರೆ.
ದುರುಳನ ವಿರುದ್ಧ ದೂರು
ಮೊಹಮ್ಮದ್ ಫುಜೈಲ್ ವಿರುದ್ಧ ಮಾಧುರಿ ಮಿತ್ರ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ನನ್ನ ಮಗಳಿಗೆ ಇದಕ್ಕೂ ಮೊದಲು ಮದುವೆಯಾಗಿತ್ತು. ಆದರೆ, ದಾಂಪತ್ಯ ಸುಖಕರವಾಗಿರದೆ ಆಕೆ ವಿಚ್ಛೇದನ ಪಡೆದಳು. ಇದಾದ ಬಳಿಕ ಮೊಹಮ್ಮದ್ ಫುಜೈಲ್ ಆಕೆಗೆ ಪರಿಚಯವಾದ. ಎಷ್ಟು ಬೇಡವೆಂದರೂ ಕೇಳದೆ ಆತನನ್ನು ಮದುವೆಯಾದಳು. ಈಗ ನೋಡಿದರೆ ಆಕೆ ಪತಿಯಿಂದ ಕಿರುಕುಳ ಅನುಭವಿಸಿದ್ದಾಳೆ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮೊಹಮ್ಮದ್ ಫುಜೈಲ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Murder Case : ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಮುಸ್ಲಿಂ ಯುವಕನ ಕೊಂದ ಅರ್ಚಕ