ನವದೆಹಲಿ: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಸ್ಟ್ಯಾಂಡಪ್ ಕಮಿಡಿಯನ್ ಮುನಾವರ್ ಫಾರೂಕಿ (Munawar Faruqui) ಅವರ ಶೋ ಬೆಂಗಳೂರಿನಲ್ಲಿ ರದ್ದಾದ ಬೆನ್ನಲ್ಲೇ ದೆಹಲಿಯಲ್ಲಿ ನಡೆಯಬೇಕಿದ್ದ ಶೋ ಕೂಡ ರದ್ದಾಗಿದೆ. ಭದ್ರತಾ ಕಾರಣಗಳಿಂದಾಗಿ ಪೊಲೀಸರು ಮುನಾವರ್ ಶೋಗೆ ಅನುಮತಿ ನಿರಾಕರಿಸಿದ್ದಾರೆ.
ಮುನಾವರ್ ಅವರ ಶೋಗೆ ಅನುಮತಿ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ ಬೆನ್ನಲ್ಲೇ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಭಾನುವಾರ ಕೇಂದ್ರೀಯ ದೆಹಲಿಯ ಎಸ್‌ಪಿಎಂ ಸಿವಿಕ್ ಸೆಂಟರ್‌ನಲ್ಲಿರುವ ಕೇದಾರನಾಥ ಸಾಹ್ನಿ ಆಡಿಟೋರಿಯಂನಲ್ಲಿ ಶೋ ಆಯೋಜಿಸಲಾಗಿತ್ತು.
“ಭದ್ರತಾ ಕಾರಣಗಳಿಂದಾಗಿ ಮುನಾವರ್ ಫಾರೂಕಿ ಅವರ ಶೋಗೆ ಅನುಮತಿ ನೀಡಿಲ್ಲ. ಕಾನೂನು ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ” ಎಂದು ಸೆಂಟ್ರಲ್ ಜಿಲ್ಲೆ ಡಿಸಿಪಿ ಶ್ವೇತಾ ಚೌಹಾಣ್ ತಿಳಿಸಿದ್ದಾರೆ.
ಕಳೆದ ವರ್ಷ ಮಧ್ಯಪ್ರದೇಶದಲ್ಲಿ ನಡೆದ ಶೋ ಒಂದರಲ್ಲಿ ಮುನಾವರ್ ಫಾರೂಕಿ ಅವರು ಜೋಕ್ ಮಾಡುವ ಭರದಲ್ಲಿ ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿದೆ. ಇದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಬೆಂಗಳೂರು ಸೇರಿ ೧೦ಕ್ಕೂ ಹೆಚ್ಚಕ್ಕೂ ಕಡೆ ಮುನಾವರ್ ಶೋಗಳು ರದ್ದಾಗಿವೆ. ಕೆಲವು ದಿನಗಳ ಹಿಂದಷ್ಟೇ ಇವರ ಶೋ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ರದ್ದಾಗಿತ್ತು.
ಇದನ್ನೂ ಓದಿ | Munawar Faruqui | ಮುನಾವರ್ ಫಾರೂಕಿ ಶೋ ರದ್ದುಗೊಳಿಸಿದ ಬೆಂಗಳೂರು ಪೊಲೀಸರು, ಕಾರಣ ಏನು?