ಬೆಂಗಳೂರು: 2021ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಶೋ ಒಂದರಲ್ಲಿ ʻಬಿಗ್ ಬಾಸ್ ಸೀಸನ್ 17ʼರ ವಿನ್ನರ್ ಮುನಾವರ್ ಫಾರೂಕಿ (Munawar Faruqui) ಅವರು ಜೋಕ್ ಮಾಡುವ ಭರದಲ್ಲಿ ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿತ್ತು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಇದಕ್ಕಾಗಿ ಅವರು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಇದಾದ ಬಳಿಕ ಮುನಾವರ್ ಫಾರೂಕಿ ಭಾಗವಹಿಸಬೇಕಿದ್ದ ಸುಮಾರು 12 ಶೋಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಅವರಿಗೆ ಸಿಕ್ಕಿರುವ ಮಧ್ಯಂತರ ಜಾಮೀನು ರದ್ದಾಗುವ ಸಾಧ್ಯತೆಯೂ ಇದೆ. ಏಕೆಂದರೆ, ತುಕೋಗಂಜ್ ಪೊಲೀಸರು ಮಧ್ಯಂತರ ಜಾಮೀನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಮಧ್ಯಂತರ ಜಾಮೀನು ರದ್ದು ಮಾಡಿದರೆ ಮತ್ತೆ ಮುನಾವರ್ ಫಾರುಕಿ ಜೈಲಿಗೆ ಹೋಗಬೇಕಾಗುತ್ತದೆ. ʻಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಇನ್ನೂ ಚಾರ್ಜ್‌ಶೀಟ್ ಸಲ್ಲಿಕೆ ಆಗಿಲ್ಲʼʼ ಎಂದು ಪೊಲೀಸ್ ಇಲಾಖೆ ಹೇಳಿಕೆ ನೀಡಿದೆ.
ವರದಿಯ ಪ್ರಕಾರ, ಮಧ್ಯಪ್ರದೇಶ ರಾಜ್ಯ ಸರ್ಕಾರದ ಅನುಮತಿ ಬಾಕಿ ಉಳಿದಿರುವ ಕಾರಣ ಚಾರ್ಜ್‌ಶೀಟ್ ಸಲ್ಲಿಸುವಲ್ಲಿ ವಿಳಂಬವಾಗಿದೆ. ಇದನ್ನು ಮಂಜೂರು ಮಾಡಿದ ನಂತರ, ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಆದೇಶಕ್ಕೆ ಅನುಗುಣವಾಗಿ ಚಾರ್ಜ್‌ಶೀಟ್ ಅನ್ನು ಸಲ್ಲಿಸಲಾಗುತ್ತದೆ ಎನ್ನಲಾಗಿದೆ.
ಏನಿದು ವಿವಾದ?
ಮಧ್ಯಪ್ರದೇಶದಲ್ಲಿ ನಡೆದ ಶೋ ಒಂದರಲ್ಲಿ ಮುನಾವರ್ ಫಾರೂಕಿ ಅವರು ಜೋಕ್ ಮಾಡುವ ಭರದಲ್ಲಿ ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿತ್ತು. ಹೈದರಾಬಾದ್‌ನಲ್ಲಿ ಮುನಾವರ್ ಫಾರೂಕಿಯು ಶೋನಲ್ಲಿ ಭಾಗವಹಿಸದಿರುವಂತೆ ಬಿಜೆಪಿಯ ಕೆಲ ಮುಖಂಡರು ಎಚ್ಚರಿಕೆ ನೀಡಿದ್ದರು. ಅಲ್ಲದೆ, ಫಾರೂಕಿ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದರು. ಆದಾಗ್ಯೂ, ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಲ್ಲದೆ, ಕೆಲ ಮುಖಂಡರನ್ನು ವಶಕ್ಕೂ ಪಡೆದಿದ್ದರು.
ಇದನ್ನೂ ಓದಿ: Munawar Faruqui | ವಿಎಚ್‌ಪಿ ಮನವಿ ಬೆನ್ನಲ್ಲೇ ಕಮಿಡಿಯನ್ ಮುನಾವರ್ ಫಾರೂಕಿ ಶೋ ದೆಹಲಿಯಲ್ಲೂ ರದ್ದು!
ʻಬಿಗ್ ಬಾಸ್ ವಿನ್ನರ್ʼ
ಹಿಂದಿಯ ಬಿಗ್ ಬಾಸ್ 17ನೇ (Bigg Boss 17)ಆವೃತ್ತಿಯ ವಿನ್ನರ್ ಆಗಿ ಸ್ಟ್ಯಾಂಡ್ ಅಪ್ ಕಮೆಡಿಯನ್ ಮುನಾವರ್ ಫಾರೂಖಿ (Munawar Faruqui) ಅವರು ಹೊರ ಹೊಮ್ಮಿದ್ದಾರೆ. ಇನ್ನು ಕೆಲವರು ಮುನಾವರ್ ಗೆದ್ದ ಬಳಿಕ ಇದು ಫಿಕ್ಸಿಂಗ್ ಎಂದು ಆರೋಪ ಕೂಡ ಮಾಡಿದ್ದರು. ಈ ಬಗ್ಗೆ ಮುನಾವರ್ ಕೂಡ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ʻನಾನು ಫಿಕ್ಸಿಂಗ್ ವಿನ್ನರ್ ಆಗಿದ್ದಿದ್ದರೆ ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ ನನಗೆ ಸುಲಭವಾಗಿ ಸಿಗುತ್ತಿತ್ತು. ಇಡೀ ಸೀಸನ್ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್ ವಿನ್ನರ್ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್ ಅಲ್ಲ ಎಂಬುದು ಆಗ ಗೊತ್ತಾಗುತ್ತದೆʼʼ ಎಂದಿದ್ದರು.
ಬಿಗ್ ಬಾಸ್ 17 ಗೆದ್ದಿರುವ ಮುನಾವರ್ ಫರೂಖಿ ಅವರಿಗೆ ಟ್ರೋಫಿ ದೊರೆತಿದ್ದು, ಜತೆಗೆ 50 ಲಕ್ಷ ರೂ. ಬಹುಮಾನ ಕೊಡ ನೀಡಲಾಗಿದೆ. ಇಷ್ಟೇ ಅಲ್ಲದೇ, ಐಷಾರಾಮಿ ಕಾರ್ ಕೂಡ ಬಹುಮಾನ ರೂಪವಾಗಿ ಬಂದಿದೆ. ಅಭಿಷೇಕ್ ಕುಮಾರ್ ಮೊದಲ ರನ್ನರ್ ಅಪ್ ಆದರೆ ನಟಿ ಅಂಕಿತಾ ಲೋಖಂಡೆ ಮತ್ತು ಅರುಣ್ ಮಾಶೆಟ್ಟಿ ಅವರು ಕ್ರಮವಾಗಿ ಎರಡು ಮತ್ತು ಮೂರನೇ ರನ್ನರ್ ಅಪ್ ಆದರು. ಮೂರು ತಿಂಗಳ ಕಾಲ ನಡೆದ ಈ ಶೋ ಜನವರಿ 28, ಭಾನುವಾರ ರಾತ್ರಿ ಅಂತ್ಯಗೊಂಡಿತು.