Site icon Vistara News

‘ಆವೋಗೆ ಜಬ್‌ ತುಮ್‌’ ಖ್ಯಾತಿಯ ಸಂಗೀತ ಮಾಂತ್ರಿಕ ರಶೀದ್‌ ಖಾನ್‌ ಇನ್ನಿಲ್ಲ

Ustad Rashid Khan

Music maestro Rashid Khan dies at 55, was battling cancer

ಕೋಲ್ಕೊತಾ: ಸಂಗೀತ ಮಾಂತ್ರಿಕ, ಶಾಸ್ತ್ರೀಯ ಸಂಗೀತದಲ್ಲಿ ಮೇರು ಸಾಧನೆಗೈದ, ‘ಆವೋಗೆ ಜಬ್‌ ತುಮ್‌’ ಹಾಡಿನ ಖ್ಯಾತಿಯ ಉಸ್ತಾದ್‌ ರಶೀದ್‌ ಖಾನ್‌ (Ustad Rashid Khan) ಅವರು ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು (55) ಕೋಲ್ಕೊತಾದ ಟಾಟಾ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ (Tata Memorial Cancer Hospital) ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ (ಜನವರಿ 9) ಮೃತಪಟ್ಟಿದ್ದಾರೆ. ಆಸ್ಪತ್ರೆ ವೈದ್ಯರು ಇವರ ಸಾವಿನ ಕುರಿತು ಮಾಹಿತಿ ನೀಡಿದ್ದಾರೆ.

ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ‌ (ಜನನೇಂದ್ರೀಯಕ್ಕೆ ಸಂಬಂಧಿಸಿದ ಒಂದು ಗ್ರಂಥಿ) ಬಳಲುತ್ತಿದ್ದ ಉಸ್ತಾದ್‌ ರಶೀದ್‌ ಖಾನ್‌ ಅವರನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೋಲ್ಕೊತಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಕ್ಯಾನ್ಸರ್‌ ಪ್ರಮಾಣವು ಫೈನಲ್‌ ಸ್ಟೇಜ್‌ನಲ್ಲಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರವೀಂದ್ರ ಸದನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ಜನವರಿ 10ರಂದು ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಸಂತಾಪ ಸೂಚಿಸಿದ ಮಮತಾ ಬ್ಯಾನರ್ಜಿ

ಉಸ್ತಾದ್‌ ರಶೀದ್‌ ಖಾನ್‌ ಅವರು ನಿಧನರಾಗಿದ್ದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಪಶ್ಚಿಮ ಬಂಗಾಳ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರೂ ಕಂಬನಿ ಮಿಡಿದಿದ್ದಾರೆ. “ಪದ್ಮಭೂಷಣ ಉಸ್ತಾದ್‌ ರಶೀದ್‌ ಖಾನ್‌ ಅವರ ಅಗಲಿಕೆಯ ಸುದ್ದಿ ತಿಳಿದು ಅತೀವ ದುಃಖವಾಯಿತು. ಅವರ ನಿಧನದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಸ್ಥರು, ಆತ್ಮೀಯರು, ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಸುವೇಂದು ಅಧಿಕಾರಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Death News : ಹಿರಿಯ ಜಾನಪದ ವಿದ್ವಾಂಸ, ಸಾಹಿತಿ ಅಮೃತ ಸೋಮೇಶ್ವರ ಇನ್ನಿಲ್ಲ

ಆಸ್ಪತ್ರೆಯಲ್ಲೂ ಸಂಗೀತಾಭ್ಯಾಸ

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಮೇರು ಸಾಧನೆ ಮಾಡಿದ್ದ ಉಸ್ತಾದ್‌ ರಶೀದ್‌ ಖಾನ್‌ ಅವರು ಆಸ್ಪತ್ರೆಯಲ್ಲೂ ಶಾಸ್ತ್ರೀಯ ಸಂಗೀತದ ಅಭ್ಯಾಸ ನಿಲ್ಲಿಸಿರಲಿಲ್ಲ. ಕ್ಯಾನ್ಸರ್‌ ಅವರನ್ನು ಬಾಧಿಸುತ್ತಿದ್ದರೂ, ಚಿಕಿತ್ಸೆ ಮಧ್ಯೆಯೇ ಅವರು ಸಂಗೀತಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಜತೆಗೆ ಬಾಲಿವುಡ್‌ನಲ್ಲೂ ರಶೀದ್‌ ಖಾನ್‌ ಛಾಪು ಮೂಡಿಸಿದ್ದಾರೆ. ಜಬ್‌ ವಿ ಮೆಟ್‌ ಸಿನಿಮಾದ ಆವೋಗೆ ಜಬ್‌ ತುಮ್‌ ಸಾಜ್ನಾ, ಮೈ ನೇಮ್‌ ಈಸ್‌ ಖಾನ್‌ ಸಿನಿಮಾದ ಅಲ್ಲಾಹ್‌ ಹಿ ರಹೇಮ್‌, ಮೌಸಮ್‌ ಚಿತ್ರದ ಪೂರೆ ಸೆ ಜರಾ ಸಾ ಹಾಡುಗಳು ಅವರಿಗೆ ಖ್ಯಾತಿ ತಂದುಕೊಟ್ಟಿದ್ದವು. ಸಂಗೀತ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಪರಿಗಣಿಸಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version