ಸಂಭಲ್: ಇತ್ತೀಚೆಗಷ್ಟೇ ಮುಜಾಫ್ಫರ್‌ನಗರ್‌ದಲ್ಲಿ ಶಿಕ್ಷಕಿಯೊಬ್ಬಳು ಮುಸ್ಲಿಮ್ ಬಾಲಕನಿಗೆ ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳಿಂದ ಕಪಾಳಮೋಕ್ಷ ಮಾಡಿಸಿದ್ದು ಭಾರೀ ಸಂಚಲನ ಸೃಷ್ಟಿಸಿತ್ತು. ಸುಪ್ರೀಂ ಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿತ್ತು. ಈ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಅದೇ ಉತ್ತರ ಪ್ರದೇಶದ (Uttar Pradesh) ಸಂಭಲ್ ಜಿಲ್ಲೆಯಲ್ಲಿ (Sambhal District) ಮತ್ತೊಂದು ಘಟನೆ ನಡೆದಿದೆ. ಈ ಘಟನೆಯಲ್ಲಿ ಐದನೆಯ ತರಗತಿಯ ಹಿಂದೂ ಬಾಲಕನಿಗೆ (Hindu Boy) ಶಿಕ್ಷಕಿಯು ಮುಸ್ಲಿಮ್ ವಿದ್ಯಾರ್ಥಿಗಳಿಂದ (Muslim Classmate) ಕಪಾಳಮೋಕ್ಷ ಮಾಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಶಿಕ್ಷಕಿ ಕೇಳಿದ ಪ್ರಶ್ನೆಗೆ ಉತ್ತರಿಸಲು ವಿಫಲನಾದ ಹಿಂದೂ ವಿದ್ಯಾರ್ಥಿಗೆ ಮುಸ್ಲಿಮ್ ಮಕ್ಕಳಿಂದ ಕೆನ್ನೆಗೆ ಬಾರಿಸುವಂತೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ(UP Police).
ಈ ಘಟನೆ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ದುಗವಾರ್ ಹಳ್ಳಿಯ ಖಾಸಗಿ ಶಾಲೆಯೊಂದರಲ್ಲಿ ಮಂಗಳವಾರ ನಡೆದಿದೆ. ಶಿಕ್ಷಕಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಶಿಕ್ಷಕಿ ಶಾಯಿಸ್ತಾ ಅವರ ವಿರುದ್ಧ ಸಂತ್ರಸ್ತ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 153A (ಧರ್ಮ, ಜನಾಂಗ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಶ್ರೀಶ್ ಚಂದ್ರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Supreme Court: ಮುಸ್ಲಿಂ ಬಾಲಕನಿಗೆ ಶಾಲೆಯಲ್ಲಿ ಕಪಾಳ ಮೋಕ್ಷ, ಇದು ದೇಶದ ಅಂತಃಸಾಕ್ಷಿ ಅಲುಗಾಡಿಸುವ ಕೇಸ್!
ತನ್ನ ಮಗ ಶಾಲೆಯಲ್ಲಿ 5 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಶಿಕ್ಷಕಿ ಕೇಳಿದ ಪ್ರಶ್ನೆಗೆ ಉತ್ತರಿಸಲು ವಿಫಲವಾದ ಹಿನ್ನೆಲೆಯಲ್ಲಿ ತರಗತಿಯಲ್ಲಿರುವ ಮುಸ್ಲಿಮ್ ವಿದ್ಯಾರ್ಥಿಗಳ ಕೈಯಿಂದ ಕೆನ್ನೆಗೆ ಬಾರಿಸುವ ಶಿಕ್ಷೆ ನೀಡಿದ್ದಾರೆ ಎಂದು ಸಂತ್ರಸ್ತ ಬಾಲಕನ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿ ಶಿಕ್ಷಕಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.