ರಾಂಚಿ: ಬಜರಂಗ ದಳ ನಿಷೇಧದ ಕುರಿತು ಕಾಂಗ್ರೆಸ್ ಹೊರಡಿಸಿದ ಪ್ರಣಾಳಿಕೆಯು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರನ್ನೂ ಹನುಮಾನ್ ಚಾಲೀಸಾ ಪಠಿಸಿ, ಕಾಂಗ್ರೆಸ್ ಆಂಜನೇಯನಿಗೇ ಅವಮಾನ ಮಾಡಿದೆ ಎಂಬಂತೆ ಬಿಂಬಿಸಿತ್ತು. ಬಜರಂಗದಳವನ್ನು ಭಗವಾನ್ ಆಂಜನೇಯನೇ ಸ್ಥಾಪಿಸಿದ್ದಾನೆ ಎಂಬಂತೆ ಗಂಟಲು ಹರಿದುಕೊಂಡಿತ್ತು. ಖುದ್ದು ನರೇಂದ್ರ ಮೋದಿ ಅವರೇ ಪ್ರಚಾರದ ವೇಳೆ ಬಜರಂಗ ಬಲಿ ಕಿ ಜೈ ಎಂದು ಘೋಷಣೆ ಕೂಗಿದ್ದರು. ಆದರೂ, ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಇನ್ನು, ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿರುವ ಹಿನ್ನೆಲೆಯಲ್ಲಿ ಜಾರ್ಖಂಡ್ ಕಾಂಗ್ರೆಸ್ ಮುಸ್ಲಿಂ ನಾಯಕರೊಬ್ಬರು ದೇಶದಲ್ಲಿಯೇ ಬೃಹತ್ ಹನುಮಾನ್ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದಾರೆ.
ಹೌದು, ಕಾಂಗ್ರೆಸ್ ಉಚ್ಚಾಟಿತ ಶಾಸಕ ಇರ್ಫಾನ್ ಅನ್ಸಾರಿ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ಹನುಮಾನ್ ದೇವಾಲಯ ನಿರ್ಮಿಸಲು ಮುಂದಾಗಿದ್ದಾರೆ. ಕರ್ನಾಟಕ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಲೇ ಇರ್ಫಾನ್ ಅನ್ಸಾರಿ ಅವರು ಹನುಮಾನ್ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ವೇಳೆ ಅವರು ಹನುಮಾನ್ ಮಂದಿರ ನಿರ್ಮಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.
“ನಾನು ಭಗವಾನ್ ಆಂಜನೇಯನ ಭಕ್ತನಾಗಿದ್ದೇನೆ. ಮೊದಲಿನಿಂದಲೂ ನಾನು ಆಂಜನೇಯನ ಆರಾಧಕನಾಗಿದ್ದೇನೆ. ಆಂಜನೇಯ ಎಲ್ಲರಿಗೂ ಒಂದೇ ಎಂದು ಭಾವಿಸಿದ್ದೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದ್ದು, ಇದರಿಂದ ಆಂಜನೇಯನ ಮೇಲೆ ನನ್ನ ಭಕ್ತಿ ಇಮ್ಮಡಿಯಾಗಿದೆ. ಹಾಗಾಗಿ, ಜಮ್‌ತಾರದಲ್ಲಿ ದೇಶದಲ್ಲಿಯೇ ಬೃಹತ್ ಆಂಜನೇಯ ದೇವಾಲಯ ನಿರ್ಮಿಸುತ್ತೇನೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Air Travel: ವಿಮಾನದಲ್ಲಿ ಸಿಗರೇಟ್ ಸೇದಿ ಅರೆಸ್ಟ್ ಆದ ಪ್ರಯಾಣಿಕ
ದೇವಾಲಯಕ್ಕೆ ಹಣ ಎಲ್ಲಿಂದ ಹೊಂದಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನ್ಸಾರಿ, “ಜನರಿಂದ ದೇಣಿಗೆ ಸಂಗ್ರಹಿಸಿ ದೇವಾಲಯ ನಿರ್ಮಿಸುತ್ತೇನೆ. ಹಾಗೊಂದು ವೇಳೆ ಹಣ ಕಡಿಮೆ ಎನಿಸಿದರೆ, ನನ್ನ ಕಿಡ್ನಿ ಮಾರಿಯಾದರೂ ದೇವಾಲಯ ನಿರ್ಮಿಸುತ್ತೇನೆ” ಎಂದು ಹೇಳಿದ್ದಾರೆ. ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿ ಸರ್ಕಾರ ಕೆಡವಲು ಪಿತೂರಿ ನಡೆಸಿದ ಆರೋಪದಲ್ಲಿ ಅನ್ಸಾರಿ ಸೇರಿ ಕಾಂಗ್ರೆಸ್‌ನ ಮೂವರು ಶಾಸಕರನ್ನು ಉಚ್ಚಾಟನೆಗೊಳಿಸಲಾಗಿದೆ. ಕೋಲ್ಕೊತಾದಲ್ಲಿ ಇವರ ಕಾರಿನಲ್ಲಿ 50 ಲಕ್ಷ ರೂಪಾಯಿ ಪತ್ತೆಯಾಗಿತ್ತು.