ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮುಸ್ಲಿಂ ಜೋಡಿಯೊಂದು ದೇವಾಲಯದಲ್ಲಿ (Muslim Couples Marry At Temple) ಮದುವೆಯಾಗಿದೆ. ಅದರಲ್ಲೂ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ವಿಶ್ವ ಹಿಂದು ಪರಿಷತ್ (VHP) ಮುನ್ನಡೆಸುವ ದೇವಾಲಯದಲ್ಲಿ ಮುಸ್ಲಿಂ ಜೋಡಿ ಮದುವೆಯಾಗಿದ್ದಾರೆ. ಆ ಮೂಲಕ ಎರಡೂ ಸಂಘಟನೆಗಳು ಸೌಹಾರ್ದದ ಸಂದೇಶ ಸಾರಿವೆ. ಮುಸ್ಲಿಂ ಜೋಡಿಯೂ ದೇವಾಲಯದಲ್ಲಿ ಇಸ್ಲಾಮಿಕ್ ಪದ್ಧತಿ ಅನ್ವಯವೇ ಮದುವೆಯಾಗುವ ಮೂಲಕ ಸಾಮರಸ್ಯ ಮೆರೆದಿದೆ.
ಶಿಮ್ಲಾ ಜಿಲ್ಲೆಯ ರಾಮ್‌ಪುರದಲ್ಲಿರುವ ಠಾಕೂರ್ ಸತ್ಯನಾರಾಯಣ ದೇವಾಲಯದಲ್ಲಿ ಮದುವೆ ನಡೆದಿದೆ. ಇಸ್ಲಾಂ ಧರ್ಮಗುರು ನೇತೃತ್ವದಲ್ಲಿ, ಹಿಂದುಗಳು ಹಾಗೂ ಮುಸ್ಲಿಮರ ಸಮ್ಮುಖದಲ್ಲಿ ನಿಖಾ ಸಮಾರಂಭ ನಡೆದಿದೆ. ದೇವಾಲಯದಲ್ಲಿ ಆರ್‌ಎಸ್‌ಎಸ್ ಹಾಗೂ ವಿಎಚ್‌ಪಿ ಕಚೇರಿಗಳಿದ್ದು, ಎರಡೂ ಸಂಘಟನೆಗಳು ದೇವಾಲಯದ ಉಸ್ತುವಾರಿ ವಹಿಸಿಕೊಂಡಿವೆ.
“ಆರ್‌ಎಸ್‌ಎಸ್ ಹಾಗೂ ವಿಎಚ್‌ಪಿಯು ದೇವಾಲಯವನ್ನು ಮುನ್ನಡೆಸುತ್ತಿವೆ. ಸೌಹಾರ್ದದ ಭಾಗವಾಗಿ ಎರಡೂ ಸಂಘಟನೆಗಳೇ ಮದುವೆ ಸಮಾರಂಭ ಆಯೋಜಿಸಿವೆ. ಎರಡೂ ಸಂಘಟನೆಗಳನ್ನು ಮುಸ್ಲಿಂ ವಿರೋಧಿ ಎಂದೇ ಬಿಂಬಿಸಲಾಗುತ್ತಿದೆ. ಇದು ಕೇವಲ ವದಂತಿ ಎಂಬುದನ್ನು ಸಾಬೀತುಪಡಿಸಲಾಗಿದೆ” ಎಂದು ಠಾಕೂರ್ ಸತ್ಯನಾರಾಯಣ ಟ್ರಸ್ಟ್ ರಾಮ್‌ಪುರ ಪ್ರಧಾನ ಕಾರ್ಯದರ್ಶಿ ವಿನಯ್ ಶರ್ಮಾ ತಿಳಿಸಿದ್ದಾರೆ. ಮದುವೆಯಾದ ಯುವತಿಯ ತಂದೆಯೂ ಸೌಹಾರ್ದಯುತ ಮದುವೆ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೌಹಾರ್ದ ಸಂಭ್ರಮ | ಈ ಊರಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ, ಹಿಂದೂಗಳಿಂದಲೇ ಮೊಹರಂ!