ಶ್ರೀನಗರ: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಎಲ್ಲೇ ನೋಡಿದರೂ ದೀಪಗಳ ಖರೀದಿ, ಹೊಸಬಟ್ಟೆ ಕೊಳ್ಳುವುದು, ಸಿಹಿ ತಯಾರಿಕೆ, ಹೂವು-ಹಣ್ಣು ಖರೀದಿ ಭರ್ಜರಿಯಾಗಿಯೇ ನಡೆಯುತ್ತಿದೆ. ಈ ಮಧ್ಯೆ ಕಾಶ್ಮೀರದಲ್ಲಿ ಮುಸ್ಲಿಂ ಕುಟುಂಬವೊಂದು ದೀಪಾವಳಿಗಾಗಿ ಮಣ್ಣಿನ ದೀಪಗಳ ತಯಾರಿಯಲ್ಲಿ ತೊಡಗಿದೆ. ಈ ಮುಸ್ಲಿಂ ಕುಟುಂಬ ಈಗಾಗಲೇ 15 ಸಾವಿರಕ್ಕೂ ಹೆಚ್ಚೂ ಹಣತೆಗಳನ್ನು ತಯಾರಿಸಿ, ಮಾರಾಟ ಮಾಡಿದ್ದು, ಇನ್ನಷ್ಟು ಮಣ್ಣಿನ ದೀಪಗಳು ಸಿದ್ಧಗೊಳ್ಳುತ್ತಿವೆ.
ಕಾಶ್ಮೀರ ಕಣಿವೆ ನಿವಾಸಿ ಒಮರ್ ಕುಮಾರ್ ಮತ್ತು ಕುಟುಂಬದವರು ಮೊದಲಿನಿಂದಲೂ ಕುಂಬಾರಿಕೆ (ಮಡಿಕೆ ತಯಾರಿಕೆ) ವೃತ್ತಿಯನ್ನೇ ಮಾಡಿಕೊಂಡು ಬಂದವರು. ಆದರೆ ದೀಪಾವಳಿಗಾಗಿ ಮಣ್ಣಿನ ಹಣತೆಯನ್ನು ಇಷ್ಟೊಂದು ಪ್ರಮಾಣದಲ್ಲಿ ಮಾಡುತ್ತಿರುವುದು ಇದೇ ಮೊದಲು ಎಂದು ಅವರು ಹೇಳಿದ್ದಾರೆ.
ಹಿಂದುಗಳ ಹಬ್ಬ ದೀಪಾವಳಿಗಾಗಿ ಹಣತೆ ತಯಾರಿಯಲ್ಲಿ ನಿರತರಾಗಿರುವ ಒಮರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ನಾವು ಮಡಕೆ ಮಾಡುವವರು. ಹಣತೆಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವುದಿಲ್ಲ. ಕಳೆದ ವರ್ಷ 800 ಮಣ್ಣಿನ ದೀಪಗಳನ್ನಷ್ಟೇ ಮಾಡಿ ಮಾರಾಟ ಮಾಡಿದ್ದೆವು. ಆದರೆ ಈ ಸಲ 15 ಸಾವಿರಕ್ಕೂ ಹೆಚ್ಚು ಹಣತೆಗಳನ್ನು ಈಗಲೇ ತಯಾರಿಸಿದ್ದೇವೆ. ಹಣತೆಗಳನ್ನು ನಾವು ಕುಲಗಾಂವ್ಗೆ ತಲುಪಿಸುತ್ತೇವೆ. ಅಲ್ಲಿಂದ ದೇಶದ ವಿವಿಧ ಭಾಗಗಳಿಗೆ ಹಣತೆಗಳು ಸಾಗಿಸಲ್ಪಡುತ್ತಿವೆ. ಒಳ್ಳೆ ಬೇಡಿಕೆ ಇದೆ’ ಎಂದು ಹೇಳಿದ್ದಾರೆ.
ಹಾಗೇ ಇನ್ನೊಂದು ವಿಶೇಷವೆಂದರೆ ‘ಸ್ಥಳೀಯ ಹಿಂದುಗಳಿಗೆ ಅಂದರೆ ಅವರ ಮನೆಯ ಸುತ್ತಲೂ ಇರುವ ಹಿಂದುಗಳಿಗೆ ಒಮರ್ ಅವರು ಹಣತೆಗಳನ್ನು ಉಚಿತವಾಗಿಯೇ ನೀಡುತ್ತಿದ್ದಾರೆ. ಈ ಮೂಲಕ ಭ್ರಾತೃತ್ವ ಸಾರುತ್ತಿದ್ದಾರೆ. ನಮ್ಮಲ್ಲಿ ಹಿಂದು-ಮುಸ್ಲಿಂ ಬೇಧ ಭಾವ ಇಲ್ಲ. ಎಲ್ಲರೂ ಒಂದೇ ಎಂದೇ ಬಾಳುತ್ತಿದ್ದೇವೆ. ಹಿಂದುಗಳಿಂದ ನಾವು ಎಷ್ಟೆಷ್ಟೋ ವಸ್ತುಗಳನ್ನು ಖರೀದಿ ಮಾಡುತ್ತೇವೆ. ಹಾಗೇ ನಾವೂ ಅವರಿಗೆ ಅಗತ್ಯ ಇರುವ ವಸ್ತುಗಳನ್ನು ಮಾರಾಟ ಮಾಡುತ್ತೇವೆ. ಈ ದೀಪಾವಳಿಗೆ ಸಾಕಷ್ಟು ಹಣ ಸಂಪಾದನೆಯಾಯಿತು’ ಎಂದೂ ಒಮರ್ ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Video | ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮನೆಯಲ್ಲಿ ದೀಪಾವಳಿ ಸಂಭ್ರಮ; ಪಟಾಕಿ ಸಿಡಿಸಿ ಆಚರಣೆ