ಲಖನೌ: ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಭಗವದ್ಗೀತೆಯು ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ. ಇದೊಂದು ಪುಸ್ತಕವಾಗದೆ, ಜೀವನ ಮಾರ್ಗದರ್ಶಿಯಾಗಿದೆ ಎಂದು ಜಗತ್ತಿನ ಗಣ್ಯರೇ ಹೇಳಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರು ಗಂಗಾ ನದಿ ನೀರು ಹಾಗೂ ಮಣ್ಣು ಮಿಶ್ರಣ ಮಾಡಿ ಬಟ್ಟೆಯ ಮೇಲೆ (Bhagavad Gita On Cloth) ಭಗವದ್ಗೀತೆಯ ಸಾಲುಗಳನ್ನು ಬರೆದಿದ್ದಾರೆ.
ಧಾರ್ಮಿಕ ವಿಚಾರಗಳನ್ನು ಹತ್ತಿಯ ಬಟ್ಟೆಯ ಮೇಲೆ ಬರೆಯುವ ಆಸಕ್ತಿ ಹೊಂದಿರುವ ಹಾಜಿ ಇರ್ಷಾದ್ ಅಲಿ ಅವರೀಗ ಭಗವದ್ಗೀತೆಯ ಸಾಲುಗಳನ್ನು ಬರೆಯುತ್ತಿದಾರೆ. ಗಂಗಾಜಲ ಹಾಗೂ ಮಣ್ಣಿನಿಂದ ಮಾಡಿದ ಶಾಯಿ ಬಳಸಿ ಹತ್ತಿಯಿಂದ ಮಾಡಿದ ಬಿಳಿ ಬಟ್ಟೆಯ ಮೇಲೆ ಭಗವದ್ಗೀತೆಯ ಸಾಲುಗಳನ್ನು ಬರೆಯುತ್ತಿದ್ದಾರೆ. ಭಗವದ್ಗೀತೆಯ ಸಾಲುಗಳನ್ನು ಬರೆಯುವುದು ಮುಗಿದ ಮೇಲೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಮ್ಮ ಕಲಾಕೃತಿಗಳನ್ನು ಉಡುಗೊರೆ ನೀಡಲು ಹಾಜಿ ಇರ್ಷಾದ್ ಅಲಿ ತೀರ್ಮಾನಿಸಿದ್ದಾರೆ.
“ನಾನು ೧೪ ವರ್ಷದವನಾಗಿದ್ದಾಗಿನಿಂದಲೇ ಬಟ್ಟೆಯ ಮೇಲೆ ಧಾರ್ಮಿಕ ವಿಚಾರಗಳನ್ನು ಬರೆಯುವುದು ಕಲಿತೆ. ಕುರಾನ್‌ನ ೩೦ ಸಾಲುಗಳನ್ನು ಬರೆಯಲು ನನಗೆ ಆರು ವರ್ಷ ಬೇಕಾಯಿತು. ಈಗ ಭಗವದ್ಗೀತೆಯ ಸಾಲುಗಳನ್ನು ಬರೆಯುತ್ತಿದ್ದೇನೆ. ಇದಕ್ಕಾಗಿ ಅರ್ಚಕರು ಸೇರಿ ಹಲವರ ನೆರವು ಪಡೆದು ಸಂಸ್ಕೃತ ಕಲಿತಿದ್ದೇನೆ” ಎಂದಿದ್ದಾರೆ. ಧರ್ಮ ಗ್ರಂಥಗಳು, ಅವುಗಳ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಸಂಘರ್ಷಗಳು, ರಾಜಕೀಯ ಮೇಲಾಟಗಳು ನಡೆಯುತ್ತಿರುವ ಸಮಯದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಭಗವದ್ಗೀತೆಯ ಸಾಲುಗಳನ್ನು ಬರೆಯುವ ಮೂಲಕ ಸಮಾಜಕ್ಕೆ ಸಾಮರಸ್ಯದ ಸಂದೇಶವನ್ನೂ ರವಾನಿಸಿದ್ದಾರೆ.
ಇದನ್ನೂ ಓದಿ: Bhagavad Gita | ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಲ್ಲಿ ಭಗವದ್ಗೀತೆ, ಸಂಸ್ಕೃತ ವ್ಯಾಕರಣದ ದೇವಭಾಷಾ ಸಿಲಬಸ್ ಜಾರಿ