Site icon Vistara News

ಮಂದಿರ ಉದ್ಘಾಟನೆ ದಿನ ಹುಟ್ಟಿದ ಮಗನಿಗೆ ರಾಮ್‌ ರಹೀಮ್‌ ಎಂದು ಹೆಸರಿಟ್ಟ ಮುಸ್ಲಿಂ ಮಹಿಳೆ!

new born baby

Muslim woman names newborn 'Ram Rahim' to mark Ram Mandir consecration

ಲಖನೌ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಉದ್ಘಾಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾನಿಗೆ (Ram Lalla) ಪ್ರಾಣ ಪ್ರತಿಷ್ಠಾಪನೆ (Pran Pratishtha) ನೆರವೇರಿಸುವ ಜತೆಗೆ ಇದು ರಾಷ್ಟ್ರ ಮಂದಿರ ಎಂದು ಕರೆದಿದ್ದಾರೆ. ಎಲ್ಲರೂ ರಾಮನ ದರ್ಶನ ಪಡೆಯಿರಿ ಎಂದು ಕೂಡ ಮನವಿ ಮಾಡಿದ್ದಾರೆ. ಇದರ ಮಧ್ಯೆಯೇ, ರಾಮಮಂದಿರ ಲೋಕಾರ್ಪಣೆ ದಿನವಾದ ಸೋಮವಾರವೇ (ಜನವರಿ 23) ಗಂಡು ಮಗುವಿಗೆ ಜನ್ಮ ನೀಡಿದ ಮುಸ್ಲಿಂ ಮಹಿಳೆಯೊಬ್ಬರು, ಆ ಮಗುವಿಗೆ ರಾಮ್‌ ರಹೀಮ್‌ (Ram Rahim) ಎಂದು ಹೆಸರಿಡುವ ಮೂಲಕ ಸೌಹಾರ್ದದ ಸಂದೇಶ ರವಾನಿಸಿದ್ದಾರೆ.

ಹೌದು, ಉತ್ತರ ಪ್ರದೇಶದ ಫಿರೋಜ್‌ಪುರ ಜಿಲ್ಲೆಯಲ್ಲಿ ಫರ್ಜಾನಾ ಎಂಬ ಮಹಿಳೆಯು ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸುವ ದಿನವೇ ಮಗ ಜನಿಸಿದ ಕಾರಣ ಅವರು ರಾಮ್‌ ರಹೀಮ್‌ ಎಂಬುದಾಗಿ ಹೆಸರಿಟ್ಟಿದ್ದಾರೆ. ಫಿರೋಜ್‌ಪುರ ಜಿಲ್ಲಾ ಮಹಿಳಾ ಆಸ್ಪತ್ರೆಯ ಉಸ್ತುವಾರಿ ಡಾ. ನವೀನ್‌ ಜೈನ್‌ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. “ಹೆರಿಗೆ ಬಳಿಕ ತಾಯಿ-ಮಗು ಚೆನ್ನಾಗಿದ್ದಾರೆ. ಮಗುವಿನ ಅಜ್ಜಿ ಹುಸ್ನಾ ಬಾನು ಅವರು ರಾಮ್‌ ರಹೀಮ್‌ ಎಂಬುದಾಗಿ ಹೆಸರಿಟ್ಟಿದ್ದಾರೆ” ಎಂದು ನವೀನ್‌ ಜೈನ್‌ ತಿಳಿಸಿದ್ದಾರೆ.

Ram Lalla Idol

ಹಿಂದು ಮುಸ್ಲಿಮರ ಏಕತೆಯ ದೃಷ್ಟಿಯಿಂದ ಮೊಮ್ಮಗನಿಗೆ ರಾಮ್‌ ರಹೀಮ್‌ ಎಂಬುದಾಗಿ ಹೆಸರಿಡಲು ಹಸ್ನಾ ಬಾನು ತೀರ್ಮಾನಿಸಿದ್ದಾರೆ. ಇದಕ್ಕೆ ಫರ್ಜಾನಾ ಅವರು ಕೂಡ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ಕೊಟ್ಟ ದಿನ ಹಾಗೂ ರಾಮಮಂದಿರ ಲೋಕಾರ್ಪಣೆ ದಿನವೂ ಹಿಂದು-ಮುಸ್ಲಿಮರು ಯಾವುದೇ ಗಲಾಟೆಯಲ್ಲಿ ತೊಡಗದೆ, ಶಾಂತಿ-ಸೌಹಾರ್ದತೆ ಕಾಪಾಡಿದ್ದಾರೆ. ಈಗ ಮುಸ್ಲಿಂ ಮಹಿಳೆಯು ರಾಮ್‌ ರಹೀಮ್‌ ಎಂದು ಹೆಸರಿಟ್ಟಿರುವುದು ಕೂಡ ಸೌಹಾರ್ದ ಮನಸ್ಥಿತಿಗೆ ಕನ್ನಡಿಯಾಗಿದೆ.

ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆ; ಅಭಿನಂದನೆ ಸಲ್ಲಿಸಿದ ಪಾಕಿಸ್ತಾನ ಕ್ರಿಕೆಟಿಗ

11 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ ಗಿಫ್ಟ್

ಸೂರತ್‌ನಲ್ಲಿ ಗ್ರೀನ್ ಲ್ಯಾಬ್ ಡೈಮಂಡ್‌ ಕಂಪನಿಯ ಮಾಲೀಕರಾಗಿರುವ, ರಾಮನ ಮೇಲೆ ಅಪಾರ ನಂಬಿಕೆ ಇಟ್ಟಿರುವ ಮುಕೇಶ್‌ ಪಟೇಲ್‌ ಕುಟುಂಬಸ್ಥರು 11 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಕೊಡುಗೆಯಾಗಿ ಕೊಟ್ಟು ರಾಮನ ಮೇಲಿನ ಭಕ್ತಿ ಮೆರೆದಿದ್ದಾರೆ. ಚಿನ್ನ, ಮುತ್ತುಗಳು ಹಾಗೂ ವಜ್ರಗಳಿಂದ ಉತ್ತರ ಭಾರತ ಶೈಲಿಯಲ್ಲಿ ಕಿರೀಟವನ್ನು ತಯಾರಿಸಲಾಗಿದೆ. ಮುಕೇಶ್‌ ಪಟೇಲ್‌ ಅವರ ಕಂಪನಿಯ ಇಬ್ಬರು ಉದ್ಯೋಗಿಗಳು ಅಯೋಧ್ಯೆಗೆ ಬಂದು, ರಾಮಲಲ್ಲಾ ಮೂರ್ತಿಯ ಅಳತೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಇದಾದ ಬಳಿಕ ಕಿರೀಟವನ್ನು ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version