ಮುಂಬಯಿಯಲ್ಲಿ 20 ವರ್ಷದ ಯುವತಿಯೊಬ್ಬಳಿಗೆ ವಾಸಿಸಲು ಅಪಾರ್ಟ್ಮೆಂಟ್ ಸಿಗುತ್ತಿಲ್ಲವಂತೆ. ಆಕೆ ಮುಸ್ಲಿಂ ಎಂಬ ಕಾರಣಕ್ಕೇ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಕೊಡಲು, ಬಾಡಿಗೆಗೆ ಮನೆ ಕೊಡಲು ಮಾಲೀಕರು ಒಪ್ಪುತ್ತಿಲ್ಲವಂತೆ. ಆ ಯುವತಿಯ ಸ್ನೇಹಿತ ಬಲರಾಮ್ ವಿಶ್ವಕರ್ಮ ಎಂಬಾತ ಟ್ವಿಟರ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇವೆಲ್ಲವೂ ವಿವಾದಿತ ದಿ ಕೇರಳ ಸ್ಟೋರಿ ಸಿನಿಮಾದ ಪರಿಣಾಮ ಎಂದು ಆರೋಪಿಸಿದ್ದಾರೆ.
‘20ವರ್ಷದ ಮುಸ್ಲಿಂ ಯುವತಿಗೆ ಮುಂಬಯಿಯಲ್ಲಿ ವಾಸಿಸಲು ಅಪಾರ್ಟ್ಮೆಂಟ್ ಸಿಗುತ್ತಿಲ್ಲ. ಕಳೆದ ಎರಡು ತಿಂಗಳಿಂದ ಅವಳು ಪರದಾಡುತ್ತಿದ್ದಾಳೆ. ಮುಸ್ಲಿಮಳು ಎಂಬ ಒಂದೇ ಕಾರಣಕ್ಕೆ ಆಕೆಗೆ ಮನೆ ಕೊಡಲು ನಿರಾಕರಿಸಲಾಗುತ್ತಿದೆ. ಇದಕ್ಕೆಲ್ಲ ಕಾರಣ ದಿ ಕೇರಳ ಸ್ಟೋರಿ ಎಂಬ ಸಿನಿಮಾ’ ಎಂದು ಹೇಳಿರುವ ಬಲರಾಮ್ ವಿಶ್ವಕರ್ಮ ದಿ ಕೇರಳ ಸ್ಟೋರಿಯ ನಿರ್ದೇಶಕ ಸುದೀಪ್ತೋ ಸೇನ್, ನಿರ್ಮಾಪಕ ವಿಪುಲ್ ಶಾ ಅವರನ್ನು ಟ್ಯಾಗ್ ಮಾಡಿ, ‘ಹೀಗೆಲ್ಲ ಆಗುತ್ತಿರುವಾಗ ನೀವು ರಾತ್ರಿ ಅದು ಹೇಗೆ ನೆಮ್ಮದಿಯಿಂದ ನಿದ್ರಿಸುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ತೆರೆಕಂಡ ದಿ ಕೇರಳ ಸ್ಟೋರಿ ಬಗ್ಗೆ ಈಗಾಗಲೇ ಹಲವು ಸ್ವರೂಪದ ವಿವಾದ ಎದ್ದಿದೆ. ಇದರಲ್ಲಿ ಮುಸ್ಲಿಮರನ್ನು ಕೆಟ್ಟವರಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೇರಳದಲ್ಲಿ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಮತಾಂತರ ಮಾಡಿ, ಲವ್ ಜಿಹಾದ್ಗೆ ಒಳಪಡಿಸುವ, ಸಿರಿಯಾ-ಅಫ್ಘಾನಿಸ್ತಾನ ದೇಶಗಳಿಗೆ ಸಾಗಿಸಿ ಐಸಿಸ್ ಉಗ್ರಸಂಘಟನೆಗೆ ಸೇರ್ಪಡೆಗೊಳಿಸುವ ಕಥೆಯನ್ನು ಒಳಗೊಂಡಿದೆ. ಅನೇಕಾನೇಕರು ಈ ಸಿನಿಮಾ ಮೆಚ್ಚಿಕೊಂಡು, ಹೆಚ್ಚೆಚ್ಚು ಜನರು ನೋಡುವಂತೆ ಮನವಿ ಮಾಡುತ್ತಿದ್ದಾರೆ. ಹಾಗೇ, ಮತ್ತೊಂದಷ್ಟು ವರ್ಗದವರು ದಿ ಕೇರಳ ಸ್ಟೋರಿ ಹಿಂದು-ಮುಸ್ಲಿಂ ನಡುವಿನ ಕಂದಕವನ್ನು ಹೆಚ್ಚಿಸುತ್ತಿದೆ. ಮುಸ್ಲಿಮರನ್ನು ಕೆಟ್ಟವರಂತೆ ಬಿಂಬಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇದೀಗ ಬಲರಾಮ್ ವಿಶ್ವಕರ್ಮ ಕೂಡ ಅದೇ ಧಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ.
A 20yrs old female Muslim acquaintance is struggling to find an apartment since last 2 months in Mumbai. Says the amount of rejections because of her religion has only increased this year because of 'The Kerala Story'.
— Balram Vishwakarma (@Balram1801) June 11, 2023
How do you sleep in the night? @sudiptoSENtlm @VipulAlShah
ಹೀಗೆ ಮುಸ್ಲಿಮರಿಗೆ ಮನೆ ಕೊಡುತ್ತಿಲ್ಲ, ಮುಸ್ಲಿಂ ಎಂಬ ಕಾರಣಕ್ಕೆ ಮನೆ ಕೊಡಲು ನಿರಾಕರಿಸುತ್ತಿದ್ದಾರೆ ಎಂಬ ಆರೋಪ ಈಗ ಹೊಸದಾಗಿ ಕೇಳಿಬರುತ್ತಿಲ್ಲ. ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೂ ಮುನ್ನವೂ ಇಂಥ ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷ ಆಗಸ್ಟ್ನಲ್ಲಿ ಬೆಂಗಳೂರಿನಲ್ಲೇ ಇಂಥ ವರದಿಯಾಗಿತ್ತು. ಮುಸ್ಲಿಂ ಮಹಿಳೆಯೊಬ್ಬರು ಇದೇ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಕೆಲವು ಬಾಡಿಗೆ ಮನೆ ಮಾಲೀಕರು ಮತ್ತು ಆಕೆಯ ನಡುವೆ ವಾಟ್ಸ್ಆ್ಯಪ್ನಲ್ಲಿ ನಡೆದ ಸಂಭಾಷಣೆಯ ಸ್ಕ್ರೀನ್ಶಾಟ್ ಕೂಡ ಹಂಚಿಕೊಂಡಿದ್ದರು. ಇಲ್ಲಿಯೂ ಕೂಡ ಮನೆ ಮಾಲೀಕರು ಮುಸ್ಲಿಮ್ ಆದರೆ ಮನೆ ಕೊಡುವುದಿಲ್ಲ ಎಂದೇ ಹೇಳಿದ್ದು ಕಂಡುಬಂದಿತ್ತು.
ಮುಂಬಯಿಯಲ್ಲಿ ಸೆಲೆಬ್ರಿಟಿಗಳಿಗೇ ಮನೆ ಸಿಗುತ್ತಿಲ್ಲ!
ಮುಂಬಯಿ ಮಹಾನಗರದಲ್ಲಿ ಮನೆ/ಅಪಾರ್ಟ್ಮೆಂಟ್ಗಳ ಹುಡುಕಾಟ ಎಲ್ಲರಿಗೂ ಸವಾಲಾಗುತ್ತಿದೆ. ಸಾಮಾನ್ಯ ಜನರಷ್ಟೇ ಅಲ್ಲ, ಸೆಲೆಬ್ರಿಟಿಗಳೇ ಪರದಾಡುತ್ತಿದ್ದಾರೆ. ಇದೇ ವರ್ಷ ಜನವರಿ ತಿಂಗಳಲ್ಲಿ ನಟಿ ಉರ್ಫಿ ಜಾವೇದ್ ಈ ಬಗ್ಗೆ ಧ್ವನಿ ಎತ್ತಿದ್ದರು. ಮುಂಬಯಿಯಲ್ಲಿ ಬಾಡಿಗೆ ಮನೆ ಹುಡುಕಲು ಸಾಧ್ಯವಾಗುತ್ತಿಲ್ಲ. ಎಲ್ಲಿಯೂ ಮನೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. 2009ರಲ್ಲಿ ನಟ ಇಮ್ರಾನ್ ಹಷ್ಮಿ ಕೂಡ ಇದೇ ವಿಚಾರ ಹೇಳಿದ್ದರು. ನಾನು ಮುಸ್ಲಿಂ ಎಂಬ ಕಾರಣಕ್ಕೆ ನನಗೆ ಯಾರೂ ಅಪಾರ್ಟ್ಮೆಂಟ್ ಕೊಡುತ್ತಿಲ್ಲ ಎಂದಿದ್ದರು. ಇವರಷ್ಟೇ ಅಲ್ಲ, ನಟರಾದ ಐಜಾಜ್ ಖಾನ್ ಮತ್ತು ಅಲಿ ಗೋನಿ, ಕಿರುತೆರೆ ನಟಿ ಶಿರೀನ್ ಮಿರ್ಜಾ ಕೂಡ ತಮಗೆ ಆದ ಅನುಭವ ಹೇಳಿಕೊಂಡಿದ್ದರು.