ಕೊಯಿಕ್ಕೊಡ್: ಕೇರಳದ ಕೊಯಿಕ್ಕೊಡ್ ಟೌನ್ ಹಾಲ್ ಸಮೀಪ ಸುಮಾರು 50 ಮುಸ್ಲಿಂ ಮಹಿಳೆಯರು ಸೇರಿ, ಹಿಜಾಬ್ಗಳನ್ನು ಸುಟ್ಟು ಹಾಕಿದ್ದಾರೆ. ಇವರೆಲ್ಲ ಹೀಗೆ ಹಿಜಾಬ್ಗಳನ್ನು ಸುಡುವ ಮೂಲಕ ಇರಾನ್ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊಯಿಕ್ಕೋಡ್ ಟೌನ್ ಹಾಲ್ನಲ್ಲಿ ಇಸ್ಲಾಮ್ ಮುಕ್ತ ಚಿಂತಕರ ಸಂಘದಿಂದ ಮುಕ್ತ ಚಿಂತನಾ ಅಧಿವೇಶನ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮಹಿಳೆಯರು ಒಟ್ಟಾಗಿ ಹಿಜಾಬ್ ಸುಟ್ಟು ಹಾಕಿದ್ದಾರೆ.
ಇರಾನ್ನಲ್ಲಿ ಮಹ್ಸಾ ಅಮಿನಿ ಎಂಬ 22 ವರ್ಷದ ಯುವತಿ ಹಿಜಾಬ್ ಧರಿಸಿದೆ ಇದ್ದಿದ್ದಕ್ಕೆ ಆಕೆಯನ್ನು ಅಲ್ಲಿನ ನೈತಿಕ ಪೊಲೀಸರು ಬಂಧಿಸಿ, ಕಸ್ಟಡಿಯಲ್ಲಿ ಇಟ್ಟಿದ್ದರು. ಹೀಗೆ ಅವರ ವಶದಲ್ಲಿದ್ದಾಗಲೇ ಅಮಿನಿ ಮೃತಪಟ್ಟಿದ್ದಾಳೆ. ಆಗಿನಿಂದಲೂ ಇರಾನ್ನಲ್ಲಿ ಮಹಿಳೆಯರು ಉಗ್ರರೂಪದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನೈತಿಕ ಪೊಲೀಸ್ ಗಿರಿ ಮತ್ತು ಹಿಜಾಬ್ ವಿರೋಧಿಸಿ, ಕೂದಲು ಕತ್ತರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಇರಾನ್ ಮಹಿಳೆಯರ ಪ್ರತಿಭಟನೆಗೆ ಭಾರತ ಸೇರಿ, ಹಲವು ದೇಶಗಳ ಮಹಿಳೆಯರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇರಾನ್ನಲ್ಲಂತೂ ಹಿಜಾಬ್ ವಿರೋಧಿ ಪ್ರತಿಭಟನೆ ರಣರಂಗವೇ ಆಗಿದೆ. ನೂರಾರು ಜನರ ಪ್ರಾಣ ಹೋಗಿದೆ.
ಭಾರತದಲ್ಲಿ ಕೆಲವು ಮಹಿಳೆಯರು ಇರಾನ್ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಗೆ ಬೆಂಬಲ ಕೊಟ್ಟಿದ್ದರಾದರೂ ಹೀಗೆ ಹಿಜಾಬ್ನ್ನು ಸುಟ್ಟಿರಲಿಲ್ಲ. ಕೂದಲು ಕತ್ತರಿಸಿ ಅಷ್ಟೇ ಪ್ರತಿಭಟನೆ ಮಾಡಿದ್ದರು. ಇದೇ ಮೊದಲ ಬಾರಿಗೆ ಒಂದಷ್ಟು ಜನ ಮಹಿಳೆಯರು ಸೇರಿ ಹಿಜಾಬ್ ಸುಟ್ಟಿದ್ದಾರೆ.
ಇದನ್ನು ಓದಿ: Delhi University | ಲುಂಗಿ ಧರಿಸಿದ್ದಕ್ಕೆ ಕೇರಳದ 4 ವಿದ್ಯಾರ್ಥಿಗಳಿಗೆ ಎಬಿವಿಪಿ ಥಳಿತ! ಎಸ್ಎಫ್ಐ ಆರೋಪ